ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಶಾಸಕರು ಟಾರ್ಗೆಟ್; ರಾಜ್ಯಾದ್ಯಂತ ಐಟಿ ದಾಳಿ (BJP | IT Raid | Bangalore | Bellary | Yeddyurappa | Dhnajay kumar)
Bookmark and Share Feedback Print
 
ಆಡಳಿತಾರೂಢ ಬಿಜೆಪಿ ಸಚಿವರಾದ ರೆಡ್ಡಿ ಸಹೋದರರು ಹಾಗೂ ಆಪ್ತಮಿತ್ರ, ಸಚಿವ ಬಿ.ಶ್ರೀರಾಮುಲು ಅವರ ನಿಕಟವರ್ತಿಗಳ ಮನೆ ಹಾಗೂ ಕಚೇರಿ ಮೇಲೆ ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಕೂಡ್ಲಿಗೆ ಶಾಸಕ ಬಿ.ನಾಗೇಂದ್ರ ಅವರ ಬಳ್ಳಾರಿ ನೆಹರೂ ಕಾಲೋನಿಯಲ್ಲಿರುವ ಮನೆ ಮೇಲೆ ಹಾಗೂ ಕಂಪ್ಲಿ ಶಾಸಕ ಸುರೇಶ್ ಬಾಬು ಅವರ ಬಳ್ಳಾರಿಯಲ್ಲಿನ ಬಸವನಕುಂಟೆಯಲ್ಲಿರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ಬೆಂಗಳೂರು, ಬಳ್ಳಾರಿ ಹಾಗೂ ಹೊಸಪೇಟೆ ಸೇರಿದಂತೆ ರಾಜ್ಯದ 60 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಆಪ್ತರಾದ ಅಲಿಖಾನ್ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಾಸಕ ನಾಗೇಂದ್ರ ಅವರ ಬೆಂಗಳೂರಿನ ವೈಯಾಲಿಕಾವಲ್ ಮನೆ ಮೇಲೂ ದಾಳಿ ನಡೆಸಲಾಗಿದೆ. ಅದೇ ರೀತಿ ಜನಾರ್ದನ ರೆಡ್ಡಿ ಅವರ ವಕೀಲ ರಾಘವಾಚಾರ್ಯ ಅವರ ಬೆಂಗಳೂರಿನ ಮೂರು ನಿವಾಸಗಳಿಗೆ ದಾಳಿ ನಡೆಸಿದ್ದಾರೆ. ಆಡಳಿತಾರೂಢ ಬಿಜೆಪಿ ಶಾಸಕರು, ಸಚಿವರು ಹಾಗೂ ಅವರ ಆಪ್ತರನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಪತ್ತೆ ಹಚ್ಚಿದ ಆಸ್ತಿಯ ಮೌಲ್ಯದ ವಿವರ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಸಿಎಂ ಆಪ್ತ ಸಹಾಯಕರ ಮನೆ ಮೇಲೂ ದಾಳಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಿದ್ದಲಿಂಗಸ್ವಾಮಿ ಅವರ ಮೈಸೂರು ಜಿಲ್ಲೆಯ ನಂಜನಗೂಡಿನ ಕಾರ್ಯ ಗ್ರಾಮದಲ್ಲಿರುವ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು ಅರ್ಧ ಗಂಟೆಗಳ ಕಾಲ ತಪಾಸಣೆ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆನ್ನಲಾಗಿದೆ. ದಾಳಿ ಸಂದರ್ಭದಲ್ಲಿ ಸಿದ್ದಲಿಂಗಸ್ವಾಮಿ ಬೆಂಗಳೂರಿನ ನಿವಾಸದಲ್ಲಿದ್ದರು. ನಂಜನಗೂಡಿನ ಕಾರ್ಯ ಗ್ರಾಮದಲ್ಲಿನ ಮನೆಯಲ್ಲಿ ಸಿದ್ದಲಿಂಗಸ್ವಾಮಿ ಅವರ ತಂದೆ, ತಾಯಿ ಹಾಗೂ ತಮ್ಮ ಇದ್ದಿರುವುದಾಗಿ ಮೂಲಗಳು ತಿಳಿಸಿವೆ.

ಧನಂಜಯ್ ಭವಿಷ್ಯ ನಿಜ!: ಬಿಜೆಪಿ ಶಾಸಕರನ್ನು ಗುರಿಯಾಗಿರಿಸಿ ಕೇಂದ್ರದ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡ ಧನಂಜಯ್ ಕುಮಾರ್ ಭವಿಷ್ಯ ನುಡಿದ ಬೆನ್ನಿಗೇ, ಸೋಮವಾರ ರಾಜ್ಯದ ವಿವಿಧೆಡೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಧನಂಜಯ್, ಇಂದು ಆಡಳಿತ ಪಕ್ಷದವರ ಮನೆ ಮೇಲೆಯೇ ದಾಳಿಯಾಗಿದೆ. ಹಾಗಾಗಿ ನನ್ನ ನಿರೀಕ್ಷೆ ನಿಜವಾಗಿದೆ. ಆಡಳಿತಾರೂಢ ಬಿಜೆಪಿ ಪಕ್ಷದ ಬಲ ಕುಗ್ಗಿಸಲು ಕೇಂದ್ರ ಸರಕಾರ ವಿವಿಧ ತಂತ್ರ ಉಪಯೋಗಿಸುತ್ತಿದೆ ಎಂದು ಆರೋಪಿಸಿದರು. ಐಟಿ ದಾಳಿ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿನ ಬಿಜೆಪಿ ಶಾಸಕರು, ಸಚಿವರ ನಿವಾಸಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಶಂಕೆ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ