ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಪಕ್ಷ ಯತ್ನಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ಎರಡೇ ರಾಷ್ಟ್ರೀಯ ಪಕ್ಷದ ಪದ್ಧತಿ ಬರಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಹಾನಗಲ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಸೋಮವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಜೆಡಿಎಸ್ ಸಖ್ಯ ಬಿಡಬೇಕು. ರಾಜ್ಯದಲ್ಲಿ ಜೆಡಿಎಸ್ ನಾಯಿ ಕೊಡೆಯಂತೆ ಬೆಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರೇ ಪಕ್ಷ ತೊರೆಯಲಿ ಅವರು ಚುನಾವಣೆಗೂ ಮುನ್ನ ಬೇಕಾದರೆ ಪಕ್ಷಾಂತರವಾಗಲಿ, ಆ ನಿಟ್ಟಿನಲ್ಲಿ ಪಕ್ಷಾಂತರ ಕಾಯ್ದೆ ಮತ್ತಷ್ಟು ಬಲವಾಗಬೇಕು. ಅಲ್ಲದೇ ಪಕ್ಷಾಂತರವಾಗುವವರು ಕಾಂಗ್ರೆಸ್ ಅಥವಾ ಬಿಜೆಪಿ ಯಾವುದಾದರು ಒಂದನ್ನು ಆಯ್ಕೆ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಜೆಡಿಎಸ್ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ, ಅವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ಅಧಿಕಾರವಿಲ್ಲದೆ ಜೆಡಿಎಸ್ ಮುಖಂಡರು ಒದ್ದಾಡುತ್ತಿದ್ದಾರೆ. ಹಾಗಾಗಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ತಂತ್ರಗಾರಿಕೆ ನಡೆಸುತ್ತಲೇ ಇದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡದೆ, ಜೆಡಿಎಸ್ ಸಖ್ಯ ಬಿಟ್ಟು, ಪ್ರಜಾಪ್ರಭುತ್ವದ ಉಳಿಸಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.