ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿನ ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕ ನಡೆದಿರುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ದೊರೆತಿದೆ. ನೇಮಕ ಪ್ರಕ್ರಿಯೆ ಬಗ್ಗೆ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಪರಿಶೀಲನೆ ಕೈಗೊಳ್ಳಲಿದ್ದಾರೆ. ಕಾರ್ಯದರ್ಶಿಯಿಂದ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದರು.
ಮಧ್ಯವರ್ತಿಗಳ ಹಾವಳಿ ಇಲ್ಲ: ರಾಜ್ಯೋತ್ಸವ ಪ್ರಶಸ್ತಿ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲ, ಮಧ್ಯವರ್ತಿಗಳು ನನ್ನನ್ನು ಸಂಪರ್ಕಿಸಿಲ್ಲ. ಈ ಬಗ್ಗೆ ಸಮರ್ಪಕ ಮಾಹಿತಿ ದೊರೆತರೆ ದಲ್ಲಾಳಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ. ಹಣ ಪಡೆದು ಪ್ರಶಸ್ತಿಗೆ ಲಾಬಿ ಮಾಡುವವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಸಮರ್ಥಿಸಿಕೊಂಡರು.
ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಸಂಘಟಿಸಲು ಪೂರ್ವ ತಯಾರಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ನಾನಾ ಕಾರಣಗಳಿಂದ ಸಮ್ಮೇಳನ ವಿಳಂಬವಾಗಿದ್ದು, ಜನವರಿಯಲ್ಲಿ ನಿಶ್ಚಿತವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.