ಇನ್ನೆರಡು ವರ್ಷದಲ್ಲಿ 2000 ಮೆ.ವ್ಯಾಟ್ ವಿದ್ಯುತ್: ಕರಂದ್ಲಾಜೆ
ಕಡಬ, ಸೋಮವಾರ, 25 ಅಕ್ಟೋಬರ್ 2010( 17:07 IST )
ಇನ್ನೆರಡು ವರ್ಷದಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ರಾಜ್ಯವನ್ನು ವಿದ್ಯುತ್ ಸಮಸ್ಯೆಯಿಂದ ಮುಕ್ತಗೊಳಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಳೆದ ಹತ್ತು ದಿನಗಳಲ್ಲಿ 40 ಕಿರು ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ತಮ್ಮ ಹುಟ್ಟೂರು ಪುತ್ತೂರು ತಾಲೂಕಿಗೆ ಭೇಟಿ ನೀಡಿದ ಸಚಿವೆ, ತಾಲೂಕಿನ ಸವಣೂರು ಗ್ರಾಮದ ಮಾಂತೂರಿನಲ್ಲಿ ಸ್ಥಾಪಿಸಲಾಗುವ ಸಬ್ ಸ್ಟೇಶನ್ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯವನ್ನು ಆಳಿದ ಈ ಹಿಂದಿನ ಸರಕಾರಗಳು ವಿದ್ಯುತ್ ಸಮಸ್ಯೆ ಪರಿಹರಿಸುವಲ್ಲಿ ಹೆಚ್ಚಿನ ಗಮನ ನೀಡದೆ ವಿದ್ಯುತ್ ಸಮಸ್ಯೆ ಉಂಟಾಗಿದೆ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ದಿನವಹಿ 1,500 ಮೆಗಾವ್ಯಾಟ್ ವಿದ್ಯುತ್ ಖರೀದಿಸಿ ಜನತೆಗೆ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಈ ಸಮಸ್ಯೆ ಸರಿದೂಗಿಸಲು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಹೆಚ್ಚಿಸಲು ಆದ್ಯತೆ ನೀಡಲಾಗುವುದು. ಕಿರು ಜಲ ವಿದ್ಯುತ್, ಸೋಲಾರ್ ವಿದ್ಯುತ್, ಗಾಳಿ ವಿದ್ಯುತ್ ಉತ್ಪತ್ತಿ ಮಾಡಲು ವಿಶೇಷ ಪ್ರೋತ್ಸಾಹ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಮಲೆನಾಡು ಪ್ರದೇಶಗಳಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಹಾಗೂ ರೈತರಿಗೆ ತೊಂದರೆಯಾಗದಂತೆ ಕಿರುಜಲ ವಿದ್ಯುತ್ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಳೆದ ಹತ್ತು ದಿನಗಳಲ್ಲಿ ನಲವತ್ತು ಕಿರು ಜಲ ವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಇನ್ನಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಲು ಕಂಪನಿಗಳಿಗೆ ಅವಕಾಶ ನೀಡಲಾಗುವುದು ಎಂದರು.