ಪಕ್ಷ ತ್ಯಜಿಸುವ ಸಂಬಂಧ ಜೆಡಿಎಸ್‌ನ ಗುಬ್ಬಿ ಶಾಸಕರಿಗೆ ಬಿಜೆಪಿ ಶಾಸಕ ಸುರೇಶಗೌಡ ಆಮಿಷವೊಡ್ಡಿರುವ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಸಿ.ಡಿ ಬೋಗಸ್ ಎಂದು ಸಚಿವ ಜಿ.ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಮಲೇರಿಯ, ಇಲಿ ಜ್ವರದ ಬಾಧೆಯಿಂದ ಇಲ್ಲಿನ ವಿಮ್ಸ್‌ನಲ್ಲಿ ದಾಖಲಾಗಿರುವ ಹೊಸಪೇಟೆ ತಾಲೂಕಿನ ಭುವನಹಳ್ಳಿ ಮತ್ತಿತರ ಗ್ರಾಮಗಳ ರೋಗಿಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿನಾಕಾರಣ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಂಚು ರೂಪಿಸುತ್ತಿರುವ ಪ್ರತಿಪಕ್ಷ ನಾಯಕರ ವಿರುದ್ಧ ಹರಿಹಾಯ್ದು, ಸರಕಾರ ಅಸ್ಥಿರಗೊಳಿಸಲು ಜೆಡಿಎಸ್-ಕಾಂಗ್ರೆಸ್ ನಡೆಸಿರುವ ಹುನ್ನಾರ ಫಲ ನೀಡದು ಎಂದು ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಕುಮಾರ ಸ್ವಾಮಿಯದು ಹೇಡಿ ವ್ಯಕ್ತಿತ್ವ. ಈತನ ಆರೋಪಗಳು ಸುಳ್ಳಿನ ಕಂತೆಗಳಷ್ಟೇ. ಈ ಹಿಂದೆ ನಮ್ಮ ಶಾಸಕರನ್ನು ಖರೀದಿಸುವ ಕೃತ್ಯ ನಡೆಸಿದ್ದ ಈತನ ಬಗ್ಗೆ ಇಡೀ ರಾಜ್ಯದ ಜನತೆಗೆ ಗೊತ್ತು. ಸುಳ್ಳು ಸಿ.ಡಿಗಳಿಂದ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ರಾಜ್ಯದ ಜನತೆ ಜನಾದೇಶ ನೀಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸುಗಮವಾಗಿ ನಡೆಯುತ್ತಿವೆ. ಆದರೆ, ಇದನ್ನು ಸಹಿಸದ ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯ ವಿನಾಕಾರಣ ಆರೋಪ ಮಾಡುತ್ತಿರುವುದು ನಾಚಿಕೆಗೇಡು ಎಂದರು.
ನಾವು ಯಾವುದೇ ಶಾಸಕರನ್ನು ಬಲವಂತವಾಗಿ ಕರೆದಿಲ್ಲ. ಕಾಂಗ್ರೆಸ್‌ನವರೇ ನಮ್ಮ ಪಕ್ಷದ ಸಿದ್ದಾಂತ ಮತ್ತು ನಮ್ಮ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಬರುತ್ತಿದ್ದಾರೆ. ಬರುವವರನ್ನು ಬೇಡ ಎನ್ನಲಾಗುವುದಿಲ್ಲ. ಆಪರೇಷನ್ ಕಮಲ ನಮಗೆ ಅಗತ್ಯವಿಲ್ಲ. ಈಗಾಗಲೇ ನಾವು 2 ಬಾರಿ ಬಹುಮತ ಸಾಬೀತು ಪಡಿಸಿದ್ದೇವೆ ಎಂದು ಹೇಳಿದರು.