ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಸರಕಾರದ ಬಂಗಲೆಯಲ್ಲೇ ಇದ್ದುಕೊಂಡು 20 ಸಾವಿರ ರೂಪಾಯಿಗಳನ್ನು ಮನೆ ಬಾಡಿಗೆ ಎಂದು ಪಡೆಯುವುದರ ಮೂಲಕ ತಮ್ಮ ಹುದ್ದೆಯ ಘನತೆ ಮತ್ತು ಗೌರವವನ್ನು ಗಾಳಿಗೆ ತೂರಿದ್ದಾರೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ವಿಧಾನಸಭಾಧ್ಯಕ್ಷ ಬೋಪಯ್ಯ ಅವರು ಅಧ್ಯಕ್ಷರ ವೇತನದ ಜೊತೆಗೆ ಉಪಾಧ್ಯಕ್ಷರ ವೇತನವನ್ನು ಪಡೆದಿದ್ದಾರೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ವಿಧಾನಸಭಾಧ್ಯಕ್ಷರನ್ನು ವಜಾಮಾಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಭಾಧ್ಯಕ್ಷರು ಮತ್ತು ಉಪ ಸಭಾಧ್ಯಕ್ಷರ ಎರಡೂ ಹುದ್ದೆಗಳ ವೇತನವನ್ನು ಹಾಗೂ ಸರಕಾರಿ ಬಂಗಲೆಯಲ್ಲೇ ಇದ್ದುಕೊಂಡು ಮನೆ ಬಾಡಿಗೆ ಪಡೆದಿರುವ ದಾಖಲಾತಿ ಪತ್ರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿ, ಇಂತಹ ಸಭಾಧ್ಯಕ್ಷರಿಂದ ಯಾವ ರೀತಿಯ ನ್ಯಾಯ ಸಿಗಲು ಸಾಧ್ಯ ಎಂದು ಪ್ರಶ್ನಿಸಿದರು.
ಸಭಾಧ್ಯಕ್ಷರ ಹುದ್ದೆಯ ಘನತೆಯನ್ನು ಹಾಳುಮಾಡಿ ಕಾನೂನುಗಳನ್ನು ಗಾಳಿಗೆ ತೂರಿ ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವ ಹಾಗೂ ಮನೆ ಬಾಡಿಗೆಯನ್ನು ಪಡೆಯುತ್ತಿರುವ ವಿಧಾನ ಸಭಾಧ್ಯಕ್ಷ ಬೋಪಯ್ಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಆಗ್ರಹಿಸಿದರು.