ಪ್ರೇಮಿಗಳ ದಿನಾಚರಣೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್‌ಗೆ ಮಸಿ ಬಳಿದ ಕಾಂಗ್ರೆಸ್ ಯುವ ಮುಖಂಡ ಶ್ರೀನಿವಾಸ್‌ಗೆ 'ಅತ್ಯುತ್ತಮ ಯುವ ಕಾಂಗ್ರೆಸ್ ಕಾರ್ಯಕರ್ತ ಪ್ರಶಸ್ತಿ' ನೀಡಿ ಸನ್ಮಾನಿಸಿರುವ ಬಗ್ಗೆ ಶ್ರೀರಾಮಸೇನೆ ಕಿಡಿಕಾರಿದೆ.
ಫೆಬ್ರುವರಿ 14ರಂದು ನಗರದಲ್ಲಿ ಖಾಸಗಿ ಟಿವಿ ಚಾನೆಲ್‌ವೊಂದು ಪ್ರೇಮಿಗಳ ದಿನಾಚರಣೆ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಶ್ರೀನಿವಾಸ್ ಮತ್ತು ತಂಡ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದಿತ್ತು. ಈ ಘಟನೆ ರಾಜ್ಯಾದ್ಯಂತ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಇದೀಗ ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್‌ಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರು ಅತ್ಯುತ್ತಮ ಕಾರ್ಯಕರ್ತ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ಶ್ರೀರಾಮಸೇನೆಯ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್ ಗೂಂಡಾ ಸಂಸ್ಕೃತಿ ಸಾಬೀತು-ಮುತಾಲಿಕ್: 'ನಾನು ಸಂಸ್ಕೃತಿಯ ಉಳಿವಿಗಾಗಿ ಪಾಶ್ಚಾತ್ಯ ಪ್ರೇಮಿಗಳ ದಿನಾಚರಣೆ ವಿರುದ್ಧ ಹೋರಾಟ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಗೂಂಡಾ ವರ್ತನೆ ಮಾಡಿ ನನ್ನ ಮುಖಕ್ಕೆ ಮಸಿ ಬಳಿದಿದ್ದ. ಇದೀಗ ಅಂತಹ ವ್ಯಕ್ತಿಗೆ ಕಾಂಗ್ರೆಸ್ ಅತ್ಯುತ್ತಮ ಕಾರ್ಯಕರ್ತ ಪ್ರಶಸ್ತಿ ನೀಡುತ್ತದೆ ಅಂದರೆ ಇದು ಕಾಂಗ್ರೆಸ್ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಪ್ರಮೋದ್ ಮುತಾಲಿಕ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಗೂಂಡಾಗಿರಿ ನಮ್ಮ ಸಂಸ್ಕೃತಿಯಲ್ಲ ಎಂದು ಘಟನೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಹೇಳಿತ್ತು. ಅಲ್ಲದೇ ಮಸಿ ಬಳಿದಿದ್ದಕ್ಕೆ ಶ್ರೀನಿವಾಸ್‌ಗೆ ನೋಟಿಸ್ ನೀಡಿರುವುದಾಗಿಯೂ ತಿಳಿಸಿತ್ತು. ಆದರೆ ಈಗ ಗೂಂಡಾಗಿರಿ ಮಾಡಿದ ಶ್ರೀನಿವಾಸ್‌ಗೆ ಪ್ರಶಸ್ತಿ ನೀಡಿರುವುದಕ್ಕೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಗೂಂಡಾಗಳಿಗೆ ಪ್ರೋತ್ಸಾಹ ನೀಡುವುದು ತಪ್ಪು, ಹಾಗಾಗಿ ಶ್ರೀನಿವಾಸ್‌ಗೆ ನೀಡಿರುವ ಪ್ರಶಸ್ತಿಯನ್ನು ಕಾಂಗ್ರೆಸ್ ವಾಪಸ್ ಪಡೆಯನ್ನು ವಾಪಸ್ ಕೊಡಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಪಕ್ಷ ಗಾಂಧಿಯನ್ನು ಮರೆತು ಗೂಂಡಾಗಳ ಬೆನ್ನು ಹತ್ತಿದೆ ಎಂಬುದಕ್ಕೆ ಈ ಉದಾಹರಣೆ ಸಾಕ್ಷಿಯಾಗುತ್ತದೆ. ನಾವು ಕೂಡ ಕಾಂಗ್ರೆಸ್ ಧೋರಣೆ ವಿರುದ್ಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಮುತಾಲಿಕ್ ಈ ಸಂದರ್ಭದಲ್ಲಿ ಹೇಳಿದರು.
ಗೂಂಡಾಗಿರಿಗೆ ಪ್ರಶಸ್ತಿ ಕೊಟ್ಟಿಲ್ಲ-ಶ್ರೀನಿವಾಸ್: ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದಿರುವುದಕ್ಕೆ ನನಗೆ ಅತ್ಯುತ್ತಮ ಯುವ ಕಾಂಗ್ರೆಸ್ ಪ್ರಶಸ್ತಿ ನೀಡಿಲ್ಲ ಎಂದು ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ. ನಾನು ಕಳೆದ ಎರಡು ವರ್ಷಗಳಲ್ಲಿ ಪಂಜಾಬ್, ತಮಿಳುನಾಡು, ಕೇರಳ, ಪಾಂಡಿಚೇರಿ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣಾಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕೆ ಕಾಂಗ್ರೆಸ್ ನನಗೆ ಈ ಪ್ರಶಸ್ತಿ ನೀಡಿದೆ ಎಂದು ವಿವರಿಸಿದರು.
ಯುವಕರು ರಾಜಕೀಯದಿಂದ ದೂರ ಸರಿಯುತ್ತಿದ್ದು, ಆ ನಿಟ್ಟಿನಲ್ಲಿ ಯುವಕರನ್ನು ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ಮಾಡಲು ಶ್ರಮಿಸಿದ್ದೇನೆ. ನನ್ನ ಶ್ರಮವನ್ನು ಗಮನಿಸಿ ಪಕ್ಷ ನನಗೆ ಪ್ರಶಸ್ತಿ ನೀಡಿದೆ. ಮುತಾಲಿಕ್ ಅವರು ದೊಡ್ಡ ವ್ಯಕ್ತಿ, ಅಂದು ನಾನು ಆವೇಶದಲ್ಲಿ ಅವರ ಮುಖಕ್ಕೆ ಮಸಿ ಬಳಿದ್ದೇನೆಯೇ ಹೊರತು, ನನಗೆ ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಮಸಿ ಬಳಿದಿರುವುದು ವೈಯಕ್ತಿಕ ವಿಷಯ, ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಆ ಬಗ್ಗೆ ನಾನು ಹೆಚ್ಚಿಗೆ ಏನೂ ಹೇಳಲ್ಲ ಎಂದು ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ.