ಗಡಿ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಸೆಷನ್ಸ್ ಕೋರ್ಟ್‌ನಿಂದ ಒಂಬತ್ತು ಬಾರಿ ಜಾಮೀನು ರಹಿತ ವಾರಂಟ್ ಜಾರಿಯಾದರೂ ಕೋರ್ಟ್‌ಗೆ ಖುದ್ದು ಹಾಜರಾಗದ ಸಚಿವ ಜನಾರ್ದನ ರೆಡ್ಡಿ ಸೋಮವಾರ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾದರು.
ಅಕ್ರಮ ಗಣಿಗಾರಿಕೆ ವಿವಾದವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾ.ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಪ್ರೊ.ರವಿವರ್ಮ ಕುಮಾರ್, ವಾರಂಟ್ ಬಗ್ಗೆ ಮಾಹಿತಿ ನೀಡಿದ್ದರು. ಸಚಿವರ ಹೆಸರನ್ನು ಉಲ್ಲೇಖಿಸದ ಅವರು, ಇಷ್ಟೆಲ್ಲಾ ಅಕ್ರಮ ನಡೆಸಿದರು ಈ ಸಚಿವರು ಇನ್ನೂ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ತಿಳಿಸಿದರು. ವಾದ ಆಲಿಸಿದ ನಂತರ ಪೀಠ ಸಚಿವರ ನಡವಳಿಕೆ ಅಸಮಾಧಾನ ವ್ಯಕ್ತಪಡಿಸಿತು.
ಅರ್ಜಿಯಲ್ಲಿ ರೆಡ್ಡಿ ಅವರನ್ನು ಪ್ರತಿವಾದಿಯನ್ನಾಗಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾ.ಕೇಹರ್ ಅವರು, ಗೂಳಿಯ ಕೊಂಬು ಹಿಡಿದು ಬಗ್ಗಿಸಿದರಷ್ಟೇ ಅದು ಬಗ್ಗುತ್ತದೆ. ಹಾಗೆಯೇ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದವರನ್ನು ಕೋರ್ಟ್‌ಗೆ ಎಳೆದು ತಂದರಷ್ಟೇ ಅವರು ಬಗ್ಗುತ್ತಾರೆ. ಆದ್ದರಿಂದ ಅಕ್ರಮ ಗಣಿಗಾರಿಕೆ ಆರೋಪ ಯಾರ ಮೇಲೆ ಇದೆಯೋ ಅವರನ್ನು ಪ್ರತಿವಾದಿಯನ್ನಾಗಿಸಿ ಎಂದರು.
ನೀವು ಆರೋಪಿಗಳನ್ನು ಪ್ರತಿವಾದಿಯನ್ನಾಗಿಸಿ. ಅವರನ್ನು ಯಾವ ಕೋರ್ಟ್ ಕೋರ್ಟ್ ಮುಂದೆ ಹೇಗೆ ಹಾಜರುಪಡಿಸಬೇಕು ಎನ್ನುವುದು ನಮಗೆ(ಕೋರ್ಟ್‌ಗೆ) ಚೆನ್ನಾಗಿ ಗೊತ್ತಿದೆ ಎಂದು ನ್ಯಾಯಮೂರ್ತಿಗಳು ಅರ್ಜಿದಾರರ ಪರ ವಕೀಲರಿಗೆ ತಿಳಿಸಿದರು.