ಆಪರೇಶನ್ ಕಮಲದ ಮೂಲಕ ಜೆಡಿಎಸ್ ಪಕ್ಷದ ಶಾಸಕರನ್ನು ಸೆಳೆಯಲು ಮಠಾಧೀಶರನ್ನು ಬಳಸಿಕೊಳ್ಳುವ ಮೂಲಕ ಬಿಜೆಪಿ ಹೊಲಸು ರಾಜಕೀಯ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
ವಾಲ್ಮೀಕಿ ಸಮಾಜದ ಮಠಾಧೀಶರ ಪ್ರಭಾವ ಬಳಸಿ ಶಾಸಕ ವೆಂಕಟಾ ಶಿವಾರೆಡ್ಡಿ ಅವರನ್ನು ಸೆಳೆಯಲು ಒತ್ತಡ ಹಾಕಿರುವುದಕ್ಕೆ ದಾಖಲೆ ಇದೆ. ಅದೇ ರೀತಿ ಎಸ್.ಕೆ.ಬಸವರಾಜನ್ ಅವರಿಂದ ರಾಜೀನಾಮೆ ಕೊಡಿಸಲು ಚಿತ್ರದುರ್ಗ ಮೂಲದ ಮಠಾಧೀಶರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ದಾಹ ಮತ್ತು ಕುರ್ಚಿ ಉಳಿಸಿಕೊಳ್ಳಲು ಯಡಿಯೂರಪ್ಪ ಇಂಥ ಕೀಳು ಮಟ್ಟದ ರಾಜಕೀಯಕ್ಕೆ ಮುಂದಾಗುತ್ತಾರೆ ಎಂದು ಎಣಿಸಿರಲಿಲ್ಲ. ಕುರ್ಚಿ ವ್ಯಾಮೋಹಕ್ಕೆ ಮಠಾಧೀಶರನ್ನು ರಾಜಕೀಯಕ್ಕೆ ಬಳಸಿರುವುದು ಅಸಹ್ಯ ಹುಟ್ಟಿಸುತ್ತಿದೆ. ಹಣ ಬಲದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿಯಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಅದೇ ರೀತಿ ನಮ್ಮ ತಂಟೆಗೆ ಬಂದರೆ ರಾಜ್ಯದ ಆರು ಕೋಟಿ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಆದರೆ ಆರು ಕೋಟಿ ಜನರಲ್ಲಿ ನಾವೂ ಇದ್ದೇವೆ ಎಂಬುದನ್ನು ಸಿಎಂ ಮರೆಯಬಾರದು. ನಮ್ಮ ಪಕ್ಷದ ಸಂಖ್ಯೆ ಕುಗ್ಗಿಸಲು ನಾಲ್ವರು ಶಾಸಕರಿಂದ ರಾಜೀನಾಮೆ ಕೊಡಿಸಿದ್ದೀರಿ. ಆದರೆ ರಾಜ್ಯದ ಜನರ ಆಶೀರ್ವಾದದಿಂದ ಮತ್ತೆ ಅದೇ ಸಂಖ್ಯಾ ಬಲ ಗಳಿಸಿಕೊಂಡಿದ್ದೇವೆ. ಮುಂದೆ ಚುನಾವಣೆ ನಡೆದರೆ 32ಕ್ಕೂ ಹೆಚ್ಚು ಸ್ಥಾನ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.