ಚಿಕ್ಕಮಗಳೂರು, ಬುಧವಾರ, 27 ಅಕ್ಟೋಬರ್ 2010( 13:43 IST )
WD
ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಬಂಗಾರಪೇಟೆಯ ನಾರಾಯಣ ಸ್ವಾಮಿ ಹಾಗೂ ಜಗಳೂರು ಕ್ಷೇತ್ರದ ರಾಮಚಂದ್ರ ಅವರ ನಡವಳಿಕೆಯನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇಬ್ಬರ ಶಾಸಕರ ತಿಥಿ ಮಾಡುವ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿರುವ ಘಟನೆ ಬುಧವಾರ ನಡೆಯಿತು.
ರಾಜಕೀಯ ಹಗ್ಗ ಜಂಗೀಕುಸ್ತಿಯಲ್ಲಿ ವೈಯಕ್ತಿಕ ಕಾರಣ ನೀಡಿ ನಾರಾಯಣ ಸ್ವಾಮಿ ಮತ್ತು ರಾಮಚಂದ್ರ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ಬಿಜೆಪಿಯ ಆಮಿಷಕ್ಕೆ ಒಳಗಾಗಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ರಾಜೀನಾಮೆ ನೀಡಿದ್ದಾರೆಂದು ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ಲಾಭ, ಅಧಿಕಾರದ ಮೋಹಕ್ಕೆ ಸಿಲುಕಿ ಆಯ್ಕೆಯಾದ ಪಕ್ಷಕ್ಕೆ ರಾಜೀನಾಮೆ ನೀಡುವುದು ಕ್ಷೇತ್ರದ ಜನರಿಗೆ ದ್ರೋಹ ಬಗೆದಂತಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಆ ನಿಟ್ಟಿನಲ್ಲಿ ಇಂದು ಇಬ್ಬರು ಶಾಸಕರ ತಿಥಿಯನ್ನು ಸಾಂಕೇತಿಕವಾಗಿ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಆಯ್ಕೆಯಾದ ಪಕ್ಷಕ್ಕೆ ರಾಜೀನಾಮೆ ನೀಡುವುದು ಕ್ಷೇತ್ರದ ಜನರಿಗೆ ದ್ರೋಹ ಬಗೆದಂತೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮವಾದ ಬೆಳವಣಿಗೆಯಲ್ಲ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.
'ನಮ್ಮನ್ನಗಲಿದ ಶಾಸಕರ ತಿಥಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ' ಇದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಕಟ್ಟಿದ ಬ್ಯಾನರ್‌ನಲ್ಲಿ ಈ ರೀತಿ ಬರೆಯಲಾಗಿತ್ತು. ಅಲ್ಲದೇ ಇಬ್ಬರು ಶಾಸಕರ ಫೋಟೋಗಳಿಗೆ ಹೂವಿನ ಹಾರ ಹಾಕಿ, ತಿಥಿ ಕಾರ್ಯ ನೆರವೇರಿಸಿದರು. ನಂತರ ಬಾಳೆಎಲೆಯಲ್ಲಿ ಇಟ್ಟ ಅನ್ನವನ್ನು ನಾಯಿಗಳಿಗೆ ಕೊಡಲಾಯಿತು!