ನಾನು ಯಾವುದೇ ಪಿತೂರಿ ನಡೆಸಿಲ್ಲ, ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ತಿಪ್ಪರಲಾಗ ಹಾಕುತ್ತಿದ್ದರೆ, ಮತ್ತೊಂದೆಡೆ ರೇಣುಕಾಚಾರ್ಯಗೆ ಆ ದೇವರು ಇನ್ನು ಮುಂದಾದರು ಒಳ್ಳೆ ಬುದ್ದಿ ಕೊಡಲಿ ಎಂದು ಸಂಪುಟದ ಸಹೋದ್ಯೋಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಸೋಮಣ್ಣ ಸಚಿವರಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ ನಾನಾ ಇಲಾಖೆ ಅಧಿಕಾರಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಜನರ ಆಶೀರ್ವಾದ ಪಡೆದು ಗದ್ದುಗೆ ಏರಿರುವ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದವರನ್ನು ದೇವರು ಎಂದಿಗೂ ಕ್ಷಮಿಸುವುದಿಲ್ಲ. ಗುಂಪುಗಾರಿಕೆ ಮಾಡಿದರೆ ಏನಾಗುತ್ತೆ ಎಂಬುದನ್ನು ರೇಣುಕಾಚಾರ್ಯ ಅರಿತುಕೊಂಡರೆ ತುಂಬಾ ಒಳ್ಳೆಯದು ಎಂದು ಸಲಹೆ ನೀಡಿದರು.
ಜನಪ್ರತಿನಿಧಿಗಳ ಪ್ರತಿಯೊಂದು ಚಟುವಟಿಕೆಯ ಮೇಲೆ ಜನಸಾಮಾನ್ಯರು ನಿಗಾ ಇಟ್ಟಿರುತ್ತಾರೆ ಎಂಬ ಸಾಮಾನ್ಯ ಜ್ಞಾನ ಇರಬೇಕು. ಎಲ್ಲಾ ರೀತಿಯ ಗೊಂದಲ ಸೃಷ್ಟಿಸಿದ ಮೇಲೆ ನಾನು ಏನೂ ಮಾಡಿಲ್ಲ ಎಂದು ಸಮಜಾಯಿಷಿ ಕೊಡುವುದರಲ್ಲಿ ಅರ್ಥವಿಲ್ಲ ಎಂದು ರೇಣುಕಾಚಾರ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ದೂರಿದ ಸಚಿವರು, ಅವರಿಗೆಲ್ಲಾ ಚಳಿ ಬಿಡಿಸಿ ಕೆಲಸ ಮಾಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಪ್ರತಿ ತಿಂಗಳು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಒಂದೊಂದು ದಿನ ಇರುತ್ತೇನೆ. ಆ ಸಂದರ್ಭದಲ್ಲಿ ತಾಲೂಕಿನ ಅಭಿವೃದ್ದಿಯ ಬಗ್ಗೆ ಪರಿಶೀಲಿಸುವೆ ಎಂದರು.