ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಡ್ರಾಮಾ ಠುಸ್!: ಭಿನ್ನರ ಸೇರ್ಪಡೆ ಪ್ರಶ್ನೆಯೇ ಇಲ್ಲ-ಸಿಎಂ (BJP | Yeddyurappa | Janardana Reddy | Congress | Kumaraswamy)
Bookmark and Share Feedback Print
 
ಬಿಜೆಪಿ ಭಿನ್ನಮತೀಯ ಬಣದ ಮೂವರು ಕ್ಷಮೆಯಾಚಿಸಿ ಮತ್ತೆ ಪಕ್ಷಕ್ಕೆ ಸೇರಲು ಮುಂದಾಗಿರುವ ಕ್ರಮಕ್ಕೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಶಾಸಕರಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಅನರ್ಹ ಶಾಸಕರ ಪ್ರಕರಣ ಕೋರ್ಟ್‌ ಕಟಕಟೆಯಲ್ಲಿ ಇದೆ. ನಾವೆಲ್ಲರೂ ಕೋರ್ಟ್ ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದೇವೆ. ಆ ಹಿನ್ನೆಲೆಯಲ್ಲಿ ಈಗ ಬಂದು ಕ್ಷಮೆಯಾಚಿಸುತ್ತೇವೆ, ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬುಧವಾರ ನಡೆದ ನಾಟಕೀಯ ಬೆಳವಣಿಗೆ ಬಗ್ಗೆ ಸಿಎಂ ಈ ರೀತಿಯಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಸ್.ಕೆ.ಬೆಳ್ಳುಬ್ಬಿ, ಡಾ.ಸಾರ್ವಭೌಮ ಬಗಲಿ ಹಾಗೂ ವಿಶ್ವಾಸಮತ ಯಾಚನೆ ವೇಳೆ ವಿಪ್ ಉಲ್ಲಂಘಿಸಿದ ಮಾನಪ್ಪ ವಜ್ಜಲ್ ಬುಧವಾರ ಸಂಜೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮುಂದೆ ಹಾಜರಾಗಿ ಕ್ಷಮೆಯಾಚಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿರಲು ಪಕ್ಷದ ನಾಯಕರು ತೀರ್ಮಾನಿಸಿರುವುದು ಭಿನ್ನಮತೀಯ ಮೂವರು ಶಾಸಕರ ನಾಟಕಕ್ಕೆ ಆರಂಭದಲ್ಲೇ ತೆರೆ ಬಿದ್ದಂತಾಗಿದೆ.

ಬೆಳ್ಳುಬ್ಬಿ, ಡಾ.ಸಾರ್ವಭೌಮ ಬಗಲಿ ಹಾಗೂ ವಜ್ಜಲ್ ಭಿನ್ನಮತೀಯ ಗುಂಪಿನಿಂದ ಹೊರಬಂದು ಬಿಜೆಪಿ ರಾಜ್ಯಾಧ್ಯಕ್ಷರಲ್ಲಿ ಕ್ಷಮೆಯಾಚಿಸಿ ಮರು ಸೇರ್ಪಡೆಗೊಳ್ಳಲು ನಿರ್ಧಾರಿಸಿದ್ದಾರೆಂಬ ಸುದ್ದಿ ನಿನ್ನೆ ಎಲ್ಲೆಡೆ ದಟ್ಟವಾಗಿ ಹಬ್ಬಿತ್ತು. ಸಚಿವ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಮೂವರು ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ಮುಂದೆ ಹಾಜರಾಗಿ ಕ್ಷಮೆಯಾಚಿಸುವ ಯೋಜನೆ ರೂಪಿಸಿದ್ದರು. ಅನರ್ಹ ಶಾಸಕರು ಬುಧವಾರ ಸಂಜೆ ಪಕ್ಷದ ಕಚೇರಿಗೆ ಬರಲಿದ್ದಾರೆ ಎಂದು ರೆಡ್ಡಿ ಅವರ ವಕ್ತಾರ ಮಾಧ್ಯಮ ಕಚೇರಿಗಳಿಗೆ ಸಂದೇಶ ರವಾನಿಸಿದ್ದರು.

ಈ ಸುದ್ದಿ ಹಬ್ಬುತ್ತಿದ್ದಂತೆಯೇ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಮುಂದೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಾಗಿ, ಯಾವುದೇ ಕಾರಣಕ್ಕೂ ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸಿದ ಭಿನ್ನಮತೀಯ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಘೋಷಣೆ ಕೂಗಿದರು. ಈ ಎಲ್ಲಾ ಒತ್ತಡದಿಂದಾಗಿ ಭಿನ್ನಮತೀಯ ಶಾಸಕರ ನಾಟಕಕ್ಕೆ ಹಿನ್ನಡೆಯಾದಂತಾಯಿತು.

ರಾತ್ರಿ ರಾಜ್ಯಪಾಲರನ್ನು ಭೇಟಿಯಾದ ಎಚ್‌ಡಿಕೆ: ಈ ಎಲ್ಲಾ ಬೆಳವಣಿಗೆಯ ನಡುವೆಯೇ ಬುಧವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಿನ್ನಮತೀಯ ಶಾಸಕರೊಂದಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ನೀಡಲು ಅವರು ಈ ಸಂದರ್ಭದಲ್ಲಿ ನಿರಾಕರಿಸಿದರು.

ಆದರೆ ಭಿನ್ನಮತೀಯ ಶಾಸಕರನ್ನು ಕರೆದುಕೊಂಡು ಕುಮಾರಸ್ವಾಮಿ ಅವರು ರಾತ್ರಿ ರಾಜ್ಯಪಾಲರನ್ನು ಯಾಕೆ ಭೇಟಿ ಮಾಡಿದ್ದಾರೆಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಅನರ್ಹ ಶಾಸಕರ ವಿಚಾರ ಮುಗಿದ ಅಧ್ಯಾಯ-ಸಿಟಿ ರವಿ: ಮಸಣಕ್ಕೆ ಹೋದ ಶವವನ್ನು ಮತ್ತೆ ಪೂಜಿಸಲಾಗುವುದಿಲ್ಲ, ಹಾಗೆಯೇ ಅನರ್ಹ ಶಾಸಕರ ವಿಚಾರ ಮುಗಿದ ಅಧ್ಯಾಯವಾಗಿದೆ ಎಂದು ಅನರ್ಹ ಶಾಸಕರ ಬಿಜೆಪಿ ಮರು ಸೇರ್ಪಡೆ ಕುರಿತಂತೆ ಬಿಜೆಪಿ ವಕ್ತಾರ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಅನರ್ಹ ಶಾಸಕರಿಗೆ ಜ್ಞಾನೋದಯವಾಗಿದ್ದರೆ ಅವರು ಕ್ಷೇತ್ರದ ಜನತೆ, ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಲಿ ಎಂದು ಅವರು ಸಲಹೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದರು.

ಅಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಡಲು ಬೇರೇನೂ ಕೆಲಸವಿಲ್ಲ ಎಂದು ವಾಗ್ದಾಳಿ ನಡೆಸಿರುವ ರವಿ, ಆ ನಿಟ್ಟಿನಲ್ಲಿ ಅವರು ಪದೇ, ಪದೇ ರಾಜ್ಯಾಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಅವರು ಪರಿಶ್ರಮದಿಂದ ಮುಖ್ಯಮಂತ್ರಿಯಾಗಿಲ್ಲ, ಅದೃಷ್ಟದಿಂದ ಸಿಎಂ ಗದ್ದುಗೆ ಏರಿದ್ದಾರೆಂಬುದನ್ನು ಅವರು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ