ಚಿಕ್ಕಮಗಳೂರು, ಗುರುವಾರ, 28 ಅಕ್ಟೋಬರ್ 2010( 13:36 IST )
NRB
'ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರನಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ಸದಸ್ಯರ (ಪುತ್ರರ?) ಬಂಧನವಾಗುವ ಸಾಧ್ಯತೆ ಇರುವುದಾಗಿ' ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಬಾಂಬ್‌ವೊಂದನ್ನು ಸಿಡಿಸಿದ್ದಾರೆ.
ಗುರುವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯ ಜನತಾ ಪಕ್ಷ ಅಥವಾ ಮುಖ್ಯಮಂತ್ರಿ ವಿರುದ್ದ ತಾನು ವೈಯಕ್ತಿಕವಾಗಿ ಹೋರಾಟ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸರಕಾರದ ಭ್ರಷ್ಟಾಚಾರ ನಿಲ್ಲುವವರೆಗೆ ತಮ್ಮ ಸಮರ ಮುಂದುವರಿಸುವುದಾಗಿ ಹೇಳಿದರು.
ಬೆಂಗಳೂರು ಸುತ್ತಮುತ್ತ ನಡೆದಿರುವ ಭೂ ಹಗರಣದಲ್ಲಿ ಸ್ವತಃ ಕಂದಾಯ (ಕರುಣಾಕರ ರೆಡ್ಡಿ) ಸಚಿವರೇ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ಗಂಭೀರವಾಗಿ ಆರೋಪಿಸಿದರು. ಅಷ್ಟೇ ಅಲ್ಲ ಆಡಳಿತಾರೂಢ ಹಾಗೂ ವಿಪಕ್ಷಗಳ ಶಾಸಕರು ಪಕ್ಷಾಂತರ ಮಾಡದಂತೆ ಮುಖ್ಯಮಂತ್ರಿಗಳು ಜಾಣತನದ ಸಲಹೆಯನ್ನೂ ನೀಡಿರುವುದಾಗಿ ವ್ಯಂಗ್ಯವಾಡಿದರು.
ತಮ್ಮ ಸರಕಾರ ಸುಭದ್ರವಾಗಿದೆ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ಪುನಾರಚನೆಗೆ ಕೈಹಾಕಿದರೆ ಬಿಜೆಪಿ ಸರಕಾರ ಪತನವಾಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಇತ್ತೀಚೆಗಷ್ಟೇ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ, ಬಿಬಿಎಂಪಿ ಸದಸ್ಯ ಜಗದೀಶ್ ನಾಯ್ಡು ಸಾಕ್ಷಿಯೊಬ್ಬರಿಗೆ ಒಂದು ಲಕ್ಷ ರೂಪಾಯಿ ಲಂಚ ನೀಡುತ್ತಿದ್ದ ಸಂದರ್ಭದಲ್ಲಿಯೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಇಬ್ಬರು ಪುತ್ರರು(ಸಂಸದ ರಾಘವೇಂದ್ರ, ವಿಜಯೇಂದ್ರ) ಹಾಗೂ ಅಳಿಯನಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿ ಖರೀದಿಸಲು ಕುಮ್ಮಕ್ಕು ನೀಡಿರುವುದಾಗಿ ಕಾಂಗ್ರೆಸ್, ಜೆಡಿಎಸ್ ಆರೋಪಿಸಿತ್ತು. ಸಂಸದ ಬಿ.ವೈ.ರಾಘವೇಂದ್ರ ಕೂಡ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ನೀಡಿ ಲೋಪ ಎಸಗಿದ್ದರು ಎಂದು ಮುಖಂಡರು ದೂರಿದ್ದರು.