ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದೇವಸ್ಥಾನ, ಮಸೀದಿ ತೆರವಿಗೆ ವಿರೋಧ; ಬಾಗಲಕೋಟೆ ಬಂದ್ (Bagalakote | Police | Temple | Mosque | DC | Strike)
Bookmark and Share Feedback Print
 
ನವನಗರದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಂದಿರ, ಮಸೀದಿಗಳನ್ನು ನಗರಾಭಿವೃದ್ಧಿ ಪ್ರಾಧಿಕಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗುರುವಾರ ನಡೆದಿದೆ. ಕಾರ್ಯಾಚರಣೆಗೆ ಅಡ್ಡಿಪಡಿಸಿದ ಸಾರ್ವಜನಿಕರ ವಿರುದ್ಧ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ದೇವಾಲಯ ತೆರವು ಕಾರ್ಯಾಚರಣೆ ಕೈಬಿಡುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಬಾಗಲಕೋಟೆ ಬಂದ್‌ಗೆ ಕರೆ ನೀಡಿವೆ.

ನಗರದಲ್ಲಿ ಅಕ್ರಮವಾಗಿ ನಿರ್ಮಿಸಿರುವ 22 ದೇವಾಲಯ, 10 ಮಸೀದಿಗಳನ್ನು ತೆರವುಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಈಗಾಗಲೇ ನೋಟಿಸ್ ಜಾರಿಗೊಳಿಸಿತ್ತು. ಆ ನಿಟ್ಟಿನಲ್ಲಿ ಗುರುವಾರ ಬೆಳಿಗ್ಗೆ ನವನಗರದಲ್ಲಿ ನಗರಾಭಿವೃದ್ಧಿ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ದೇವಸ್ಥಾನ ತೆರವು ಕಾರ್ಯಾಚರಣೆ ಆರಂಭಿಸಿದ್ದರು.

ಕಾರ್ಯಾಚರಣೆಯಲ್ಲಿ ಹತ್ತು ದೇವಸ್ಥಾನಗಳನ್ನು ತೆರವುಗೊಳಿಸಿದ್ದರು. ನವನಗರದಲ್ಲಿನ ಹನುಮಾನ್ ದೇವಸ್ಥಾನವನ್ನು ಅಧಿಕಾರಿಗಳು ಕೆಡವಲು ಮುಂದಾದಾಗ ಹೆಂಗಸರು, ಮಕ್ಕಳು ಸೇರಿದಂತೆ ಸಾರ್ವಜನಿಕರು ತೀವ್ರ ಪ್ರತಿರೋಧ ಒಡ್ಡಿದರು. ಕೆಲವು ಮಹಿಳೆಯರು ದೇವಸ್ಥಾನದ ಮೇಲೆ ಹತ್ತಿ ಕುಳಿತು, ಯಾವುದೇ ಕಾರಣಕ್ಕೂ ದೇವಸ್ಥಾನ ಒಡೆಯಲು ಬಿಡಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲು ಯತ್ನಿಸಿದರು.

ಒಟ್ಟಾರೆ ಮಂದಿರ, ಮಸೀದಿ ತೆರವು ಕಾರ್ಯಾಚರಣೆಗೆ ಸಾರ್ವಜನಿಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿರುವುದರಿಂದ ಜಿಲ್ಲಾಡಳಿತ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಹೇಳಿದೆ. ಅಕ್ರಮವಾಗಿ ನಿರ್ಮಿಸಿರುವ ಮಂದಿರ, ಮಸೀದಿಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಬಾಗಲಕೋಟೆ ಬಂದ್‌ಗೆ ಕರೆ: ಪುರಾತನ ದೇವಾಲಯಗಳನ್ನು ತೆರವುಗೊಳಿಸಲು ಮುಂದಾಗಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ಖಂಡಿಸಿ ದೇವಸ್ಥಾನ ಸಂರಕ್ಷಣಾ ಸಮಿತಿ ಬಾಗಲಕೋಟೆ ಜಿಲ್ಲಾ ಬಂದ್‌ಗೆ ಕರೆ ನೀಡಿದೆ. ಇದಕ್ಕೆ ಹಿಂದೂಪರ ಸಂಘಟನೆಗಳು ಕೂಡ ಸಾಥ್ ನೀಡಿವೆ. ಆ ಹಿನ್ನೆಲೆಯಲ್ಲಿ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ದೇವಸ್ಥಾನ ತೆರವು ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಳಿಸುವವರೆಗೆ ಅನಿರ್ದಿಷ್ಟಾವಧಿ ಬಂದ್ ಮಾಡುವುದಾಗಿ ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಅಲ್ಲದೆ, ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾಯಿಸಬೇಕೆಂದು ಸಂಘಟನೆಗಳು ಆಗ್ರಹಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ