ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 11 ಅನರ್ಹರ ಶಾಸಕತ್ವ: ಶುಕ್ರವಾರ ಮಧ್ಯಾಹ್ನ ತೀರ್ಪು (Justice Sabhahit | 11 Disqualified MLAs | Dissident MLAs | BJP | Karnataka Crisis)
Bookmark and Share Feedback Print
 
11 ಮಂದಿ ಬಿಜೆಪಿಯ ಅತೃಪ್ತ ಶಾಸಕರ ಅನರ್ಹತೆ ವಿಚಾರದಲ್ಲಿ ಇಬ್ಬರು ನ್ಯಾಯಮೂರ್ತಿಗಳಿಂದ ಬಂದಿರುವ ವೈರುಧ್ಯಮಯ ತೀರ್ಪಿನ ಕಾರಣದಿಂದಾಗಿ, ಬಳಿಕ ನೇಮಕಗೊಂಡಿದ್ದ ಮೂರನೇ ನ್ಯಾಯಮೂರ್ತಿಗಳಾದ ನ್ಯಾ.ವಿ.ಜಿ.ಸಭಾಹಿತ್ ಅವರ ಏಕಸದಸ್ಯ ಪೀಠದ ತೀರ್ಪು ಶುಕ್ರವಾರ ಮಧ್ಯಾಹ್ನ ಹೊರಬರುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ನಡೆದ ರಾಜಕೀಯ ತಿಕ್ಕಾಟಗಳಿಂದಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರೇರಣೆಯಿಂದ ರೆಸಾರ್ಟ್ ರಾಜಕಾರಣದಲ್ಲಿ ನಿರತವಾಗಿ, ರಾಜ್ಯ ಸರಕಾರ ಉರುಳುವ ಹಂತಕ್ಕೆ ತಲುಪಿದ್ದರಿಂದ ರಾಜ್ಯ ವಿಧಾನಸಭಾಧ್ಯಕ್ಷರು ಈ 11 ಮಂದಿ ಬಿಜೆಪಿಯ ಬಂಡಾಯ ಶಾಸಕರನ್ನು ಅ.11ರಂದು ವಿಶ್ವಾಸಮತ ಯಾಚನೆಯ ದಿನ ಬೆಳಿಗ್ಗೆ, ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಶಾಸಕತ್ವದಿಂದ ಅನರ್ಹಗೊಳಿಸಿದ್ದರು.

ಇದರಿಂದ ರೊಚ್ಚಿಗೆದ್ದಿದ್ದ ಈ ಶಾಸಕರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ಕುರಿತು ಮುಖ್ಯನ್ಯಾಯಮೂರ್ತಿ ಖೇಹರ್ ಹಾಗೂ ನ್ಯಾ.ಎನ್.ಕುಮಾರ್ ವಿಭಿನ್ನ ತೀರ್ಪು ನೀಡಿದ್ದರು. ನಾಲ್ಕು ಅಂಶಗಳಲ್ಲಿ ಮೂರು ಅಂಶಗಳ ಬಗ್ಗೆ ಇಬ್ಬರೂ ನ್ಯಾಯಮೂರ್ತಿಗಳು ಸಮಾನ ಅಭಿಪ್ರಾಯ ಹೊಂದಿದ್ದರು. ಸ್ಪೀಕರ್ ಅವರು ಶಾಸಕರನ್ನು ಅನರ್ಹಗೊಳಿಸಿದ ಒಂದು ಅಂಶದ ಬಗ್ಗೆ ಖೇಹರ್ ಸಹಮತ ವ್ಯಕ್ತಪಡಿಸಿದ್ದರೆ, ನ್ಯಾ.ಕುಮಾರ್ ತಿರಸ್ಕರಿಸಿದ್ದರು. ಇದರಿಂದಾಗಿ ತೀರ್ಪನ್ನು ಮೂರನೇ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗಿತ್ತು.

ಇದೀಗ ಇಬ್ಬರು ನ್ಯಾಯಮೂರ್ತಿಗಳು ನೀಡಿದ್ದ ತೀರ್ಪಿನಲ್ಲಿ ಒಬ್ಬರ ತೀರ್ಪನ್ನು ನ್ಯಾ.ಸಭಾಹಿತ್ ಅಂತಿಮ ತೀರ್ಪನ್ನಾಗಿ ನೀಡಬೇಕಾಗಿದೆ. ಶುಕ್ರವಾರ ಮಧ್ಯಾಹ್ನ 2.30ರ ವೇಳೆಗೆ ತೀರ್ಪು ಹೊರಬರುವ ನಿರೀಕ್ಷೆ ಇದೆ.

ಇದರೊಂದಿಗೆ ಐವರು ಪಕ್ಷೇತರ ಶಾಸಕರ ಅನರ್ಹತೆ ವಿಚಾರದಲ್ಲಿ ತೀರ್ಪು ಕಾಯ್ದಿರಿಸಲಾಗಿದ್ದು, ಅದು ನವೆಂಬರ್ 2ರಂದು ಹೊರಬರುವ ನಿರೀಕ್ಷೆ ಇದೆ.
ಸಂಬಂಧಿತ ಮಾಹಿತಿ ಹುಡುಕಿ