ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರಗತಿ ಹೆಸರಲ್ಲಿ ತಾಯಿಯೆದೆ ಸೀಳಬೇಡಿ: ವೈದೇಹಿ (Moodabidri | Nudisiri | Alvas Nudisiri | Kannada | Literature | Vaidehi | HSV)
Bookmark and Share Feedback Print
 
Vaidehi
WD

ಮೂಡುಬಿದ್ರೆ: ಅಭಿವೃದ್ದಿ ಬೇಕೆಂಬುದು ನಿಜ... ಅದಕ್ಕೂ ಒಂದು ಮಿತಿ ಎಂಬುದು ಬೇಕು. ಅದನ್ನು ನಿರ್ಧರಿಸುವವರೂ ನಾವೇ. ಆದರೆ ಪ್ರಗತಿ ಹೆಸರಿನಲ್ಲಿ ತಾಯಿಯ ಎದೆ ಕೊಯ್ದು ಮಾರಾಟಕ್ಕಿಡುವಷ್ಟು ಹೀನಾಯವಾದ, ಘೋರವಾದ ಕೃತ್ಯಕ್ಕೆ ಕೈ ಹಾಕುವುದು ಬೇಡ ಎಂದು ಪ್ರಸಿದ್ಧ ಸಾಹಿತಿ ಡಾ.ವೈದೇಹಿ ಹೇಳಿದ್ದಾರೆ.

ಶುಕ್ರವಾರ ಮೂಡುಬಿದ್ರೆ ವಿದ್ಯಾಗಿರಿಯಲ್ಲಿ ಆರಂಭವಾದ, ಏಳನೇ ವರ್ಷದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ'ಯ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಬೆಳಕು ಬೇಕು, ಹಾಗಂತ ನಕ್ಷತ್ರಗಳೇ ಕಾಣಿಸದಂತೆ ಮಾಡುವ ಬೆಳಕಂತೂ ಬೇಡ ಎಂದರು.

'ಕನ್ನಡ ಮನಸ್ಸು- ಜೀವನಮೌಲ್ಯ' ಪರಿಕಲ್ಪನೆ ಮುಂದಿಟ್ಟುಕೊಂಡು ವಿಚಾರ ಮಂಡಿಸಿದ ಅವರು, ತಿಳಿಮುಗಿಲ ತೊಟ್ಟಿಲಲಿ ಮಲಗಿರುವ ಚಂದಿರನನ್ನು ನೋಡುವ ಮುಗ್ಧ ಮನಸು ನಮ್ಮಲ್ಲಿ ಉಳಿಯಬೇಕಾಗಿದೆ ಎಂದರಲ್ಲದೆ, 'ಬೇಕು'ಗಳ ಧಾವಂತದಲ್ಲಿ ನಾವು ಸತ್ವ ಕಳೆದುಕೊಳ್ಳುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಜೀವ- ಜೀವನಗಳನ್ನು ಬಲಿ ಕೊಟ್ಟಾದರೂ ಉದ್ಯಮಗಳು ಉಳಿಯಬೇಕೇ? ಜನಪರ ಕಾಳಜಿ ಇದೆ ಎನ್ನುವ ಯಾವುದೇ ಸರಕಾರದೆದುರು ಇಂದು ಜನಮನ ಗೆಲ್ಲುವ, ಫಲವತ್ತಾದ ನೆಲವನ್ನು, ಚರಾಚರ ವಸ್ತುಗಳನ್ನು ರಕ್ಷಿಸುವ ಒಂದು ಅಪೂರ್ವ ಅವಕಾಶವಿದೆ. ನೋವಿಗೆ, ಬದುಕಿಗೆ ಸ್ಪಂದಿಸುವ ಸರಕಾರಗಳಿಗೆ ಯಾವತ್ತೂ ಸೋಲಿಲ್ಲ ಎಂಬುದನ್ನು ಸರಕಾರ ಮನಗಾಣಬೇಕು ಎಂದ ವೈದೇಹಿ, ಹರಿಯುವ ನೀರನ್ನೂ ಬಿಡದೆ, ನಿಂತ ಬಂಡೆಗಳನ್ನೂ ಬಿಡದೆ ದೋಚುವ ಲಾಭಕೋರರು ನಮ್ಮೊಳಗೇ ಇರುವಾಗ ಅವರನ್ನು ಹೊಡೆದೋಡಿಸುವುದು ಹೇಗೆ ಎಂದು ಕೇಳಿದರು.

ಯುವ ಜಗತ್ತು ವಾಸ್ತವ ಬಿಟ್ಟು ರಿಯಾಲಿಟಿ ಶೋಗಳಲ್ಲಿ ಕರಗಿ ಹೋಗುತ್ತಿದೆ. ಅವರ ಕಣ್ಣ ಮುಂದಿನ ಮಾದರಿಗಳೇ ಬದಲಾಗಿವೆ. ಆಯ್ಕೆಯಲ್ಲಿ ಯುವ ಜನಾಂಗ ತಪ್ಪಿದೆ ಎಂದೂ ವೈದೇಹಿ ಕಳಕಳಿ ವ್ಯಕ್ತಪಡಿಸಿದರು.

ಉದ್ಘಾಟನೆ: 'ಕನ್ನಡ ಮನಸ್ಸು - ಜೀವನ ಮೌಲ್ಯ' ಪರಿಕಲ್ಪನೆಯ ಮೂರು ದಿನಗಳ ಈ ಸಾಹಿತ್ಯ-ಸಂಸ್ಕೃತಿ ಉತ್ಸವವನ್ನು ಶುಕ್ರವಾರ ಬೆಳಿಗ್ಗೆ ಖ್ಯಾತ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಉದ್ಘಾಟಿಸಿದರು.
WD

ಜೈನ ಧರ್ಮ, ಇಸ್ಲಾಂ ಸೇರಿದಂತೆ ವೈವಿಧ್ಯಮಯ ಧರ್ಮಗಳು ಶಿಲ್ಪಕಲೆ, ವಾಸ್ತು, ಸಂಗೀತ ಮತ್ತು ಕಲೆಗಳೊಂದಿಗೆ ಕನ್ನಡ ಸಾಹಿತ್ಯ-ಸಂಸ್ಕೃತಿ ಲೋಕವನ್ನು ಬೆಳಗಿವೆ. ಭಾಷೆಯು ಮತ್ತಷ್ಟು ಬೆಳೆದು ಸಮೃದ್ಧವಾಗಬೇಕಿದೆ ಎಂದು ವೆಂಕಟೇಶಮೂರ್ತಿ ಹೇಳಿದರು.

ಸಮ್ಮೇಳನದ ರೂವಾರಿ ಡಾ.ಮೋಹನ ಆಳ್ವ ಅವರು ವೇದಿಕೆಯಲ್ಲಿದ್ದರು. ಮೂರು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದ್ದು, ಜನಮನ ಸೆಳೆಯುತ್ತಿದೆ.
WD

ಚಿತ್ರಗಳು: ಅಭಿಲಾಷ್ ಪಿ.ಎಸ್.
ಸಂಬಂಧಿತ ಮಾಹಿತಿ ಹುಡುಕಿ