ಹೆಣ್ಣು ಮಕ್ಕಳಿಗೆ ಒಂದು ಸೀರೆ ತೆಗೆದುಕೊಳ್ಳುವಷ್ಟು ಬಡವರೇ? ಅಷ್ಟೇ ಅಲ್ಲ ಸೀರೆ ಕೊಡಿಸುವ ಸಾಮರ್ಥ್ಯ ಗಂಡಂದಿರಿಗೆ ಇಲ್ಲವೇ ? ಇಂತಹ ಕೆಟ್ಟ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಸರಕಾರ ಹೆಣ್ಣುಮಕ್ಕಳು ಹಾಗೂ ಗಂಡಂದಿರಿಗೆ ಅವಮಾನ ಮಾಡುತ್ತೀರಾ ?...ಹೀಗೆ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದವರು ಕೆಪಿಸಿಸಿ ನೂತನ ಅಧ್ಯಕ್ಷ ಡಾ.ಡಾ.ಜಿ.ಪರಮೇಶ್ವರ್.
ಕೆಪಿಸಿಸಿ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಇಂತಹ ಕೀಳು ಮಟ್ಟದ ಯೋಜನೆಗಳಿಂದ ರಾಜ್ಯದ ಜನರನ್ನು ವಂಚಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಬಾಂಡ್ ವಿತರಿಸಲು ಯೋಗ್ಯತೆ ಇಲ್ಲದ ಈ ಸರಕಾರ ಲೂಟಿ ಮಾಡಲು ಸೀರೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ದೂರಿದರು.
ರಾಜ್ಯದ ಬೊಕ್ಕಸ ತುಂಬಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಾರೆ. ನಿಜಕ್ಕೂ ತುಂಬಿರುವುದು ಯಡಿಯೂರಪ್ಪ ಮನೆಯ ಬೊಕ್ಕಸ ಎಂದರು. ಮೂರು ಸಾವಿರ ಎಲ್ಓಸಿ ಬಾಕಿ ಇದೆ. ಲೋಕೋಪಯೋಗಿ ಇಲಾಖೆಯೊಂದರಲ್ಲೇ ಎರಡು ಸಾವಿರ ಎಲ್ಓಸಿ ಬಾಕಿ ಇದೆ. ಆರು ತಿಂಗಳಿನಿಂದ ವೃದ್ಧರಿಗೆ 400 ರೂ.ಪಿಂಚಣಿ ನೀಡಲು ಸರಕಾರದ ಬಳಿ ಹಣ ಇಲ್ಲ ಎಂದು ಆರೋಪಿಸಿದರು.