ಬೆಂಗಳೂರು/ಹುಬ್ಬಳ್ಳಿ, ಶನಿವಾರ, 30 ಅಕ್ಟೋಬರ್ 2010( 15:01 IST )
ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯಲಿದ್ದು, ಈ ಚುನಾವಣೆಗಳನ್ನು ಎದುರಿಸಲು ಭಾರತೀಯ ಜನತಾ ಪಕ್ಷ ಸಿದ್ಧತೆ ನಡೆಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಡಿಸೆಂಬರ್‌ನಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಇನ್ನೆರಡು ದಿನಗಳೊಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನವೆಂಬರ್ 3ರಂದು ಮೈಸೂರಿನಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಸಂಬಂಧ ಕಾರ್ಯತಂತ್ರ ರೂಪಿಸಲಾಗುವುದು ಎಂದರು.
ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳನ್ನು ಪ್ರತಿಪಕ್ಷಗಳವರು ಹರಡುತ್ತಿದ್ದಾರೆ. ತಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರಕಾರವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ರಾಜ್ಯದಲ್ಲಿ ಪ್ರತಿಪಕ್ಷವಾದ ಕಾಂಗ್ರೆಸ್ ತಮ್ಮ ಸರ್ಕಾರವನ್ನು ಉರುಳಿಸುವ ಸಂಚು ನಡೆಸುತ್ತಿದೆ ಎಂದು ಆರೋಪಿಸಿದರು.
ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಇವರು ಸಹಕಾರ ಕೊಡಲಿ. ಮುಂದಿನ ಎರಡೂವರೆ ವರ್ಷಗಳ ನಂತರ ಎದುರಾಗುವ ಚುನಾವಣೆಗಳಲ್ಲಿ ಸರ್ಕಾರವನ್ನು ಬೀಳಿಸಲು ಯತ್ನ ನಡೆಸಲಿ ಎಂದು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.