ಬಲಿಪ, ನಾಗತಿಹಳ್ಳಿ ಸೇರಿ 162 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು, ಶನಿವಾರ, 30 ಅಕ್ಟೋಬರ್ 2010( 18:00 IST )
25 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 162 ಮಂದಿಗೆ ರಾಜ್ಯ ಸರಕಾರ 2009-10ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರು ಶನಿವಾರ ಸಂಜೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕ ನೀಡಲಾಗುವುದು. ಪ್ರಶಸ್ತಿಯನ್ನು ನವೆಂಬರ್ 1ರಂದು ವಿತರಿಸಲಾಗುವುದು ಎಂದು ಕಾರಜೋಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಹುಣಸವಾಡಿ ರಾಜಣ್ಣ, ಟಿವಿ9 ಸುದ್ದಿವಾಹಿನಿಯ ನಿರ್ದೇಶಕ ಮಹೇಂದ್ರ ಮಿಶ್ರಾ, ಪ್ರಜಾವಾಣಿಯ ಗಂಗಾಧರ ಮೊದಲಿಯಾರ್, ವಿಜಯ ಕರ್ನಾಟಕದ ಪಿ.ತ್ಯಾಗರಾಜ್, ಉದಯವಾಣಿ ಸಂಪಾದಕ ತಿಮ್ಮಪ್ಪ ಭಟ್, ಸುವರ್ಣವಾಹಿನಿಯ ಹಮೀದ್ ಪಾಳ್ಯ, ಉದಯ ಟಿವಿಯ ಸಮೀವುಲ್ಲಾ, ನವೀದ್ ಅತಾವುಲ್ಲಾ, ನೀನಾ ಗೋಪಾಲ್, ಮನೋಜ್ ಪಾಟೀಲ್, ಎಸ್.ರಾಜೇಂದ್ರನ್, ಸೋಮಶೇಖರ್ ಕವಚೂರು, ಆರ್.ಟಿ.ಮಜ್ಜಗಿ, ಅರುಣ್, ಎ.ಎಸ್.ಸೂರ್ಯಪ್ರಕಾಶ್, ವೀಣಾ ಗೋಪಾಲ್ ಸೇರಿದಂತೆ 15 ಮಂದಿ ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ.
ಸುಗಮ ಸಂಗೀತ ಕ್ಷೇತ್ರದ ಬಿ.ಆರ್.ಛಾಯಾ, ಚಂದ್ರಿಕಾ ಗುರುರಾಜ್, ಮಂಜುಳಾ ಗುರುರಾಜ್, ಶಾಂತಪ್ಪ ಮಲ್ಲಪ್ಪ, ಸಿನಿಮಾ ರಂಗದ ನಾಗತಿಹಳ್ಳಿ ಚಂದ್ರಶೇಖರ್, ರಮೇಶ್ ಭಟ್, ಕೋಟೆ ನಾಗರಾಜ್, ಕೆ.ವಿ.ಗುಪ್ತ, ದೇವಿ,ಪರಿಸರ ಮತ್ತು ವನ್ಯಜೀವಿ ವಿಭಾಗದಲ್ಲಿ ಉಲ್ಲಾಸ ಕಾರಂತ ಶಿವಮೊಗ್ಗ, ಪ್ರೊ.ಬಿ.ಎಂ.ಕುಮಾರಸ್ವಾಮಿ, ನೃತ್ಯವಿಭಾಗದಲ್ಲಿ ವೈಜಯಂತಿ ಕಾಶಿ, ಜಿಲಾನ್ ಭಾಷಾ, ಸುಜಾತ ರಾಜಗೋಪಾಲ್.
ಯಕ್ಷಗಾನ- ಬಲಿಪ ನಾರಾಯಣ ಭಾಗವತ, ನೆಬ್ಬೂರು ನಾರಾಯಣ ಭಾಗವತ,ಕ್ರೀಡಾ ಕ್ಷೇತ್ರದ ಕುಮಾರಿ ಅಶ್ವಿನಿ, ವಿಕಾಸಗೌಡ, ಕಲ್ಲಪ್ಪ ರಾಯಪ್ಪ, ಕೆ.ಆರ್.ಗೋಪಾಲಕೃಷ್ಣ, ಶಿವಾನಂದ ಹೊಂಬಳೆ,ಪ್ರಮೀಳಾ ಅಯ್ಯಪ್ಪ, ಗೋಪಾಲ್ ಖಾದಿರ್, ಸಾಹಿತ್ಯ ಕ್ಷೇತ್ರ-ಡಾ.ನಾಗಭೂಷಣ ಸ್ವಾಮಿ, ಬಿ.ಆರ್.ಲಕ್ಷ್ಮಣರಾವ್, ಡಾ.ನೀಲಗಿರಿ ತಳವಾರ್, ಡಾ.ಡಿ.ಎ.ಶಂಕರ್, ಲತಾ ರಾಜಶೇಖರ್, ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ದುರ್ಗಾದಾಸ್, ಶ್ರೀನಿವಾಸ್ ವೈದ್ಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇನ್ನುಳಿದಂತೆ ಉರಗ ತಜ್ಞ ಸ್ನೇಕ್ ಶ್ಯಾಮ್, ಸುಧಾ ಬರಗೂರು, ಬಾಬು ಕೃಷ್ಣಮೂರ್ತಿ, ಎಚ್.ಎಂ.ವೀರಭದ್ರಯ್ಯ, ಅಗ್ರಹಾರ ಕೃಷ್ಣಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಗಣಪತಿ ಹೊನ್ನಾ ನಾಯಕ್ ಸೇರಿದಂತೆ ಒಟ್ಟು 162 ಮಂದಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.