ಭಿನ್ನರ ರೆಸಾರ್ಟ್ ಬಿಲ್ ಪಾವತಿಸಿದ್ದು ಎಸ್.ಎಂ.ಕೃಷ್ಣ ಅಳಿಯ!
ಬೆಂಗಳೂರು, ಶನಿವಾರ, 30 ಅಕ್ಟೋಬರ್ 2010( 19:23 IST )
ಸರಕಾರವನ್ನು ಅಸ್ಥಿರಗೊಳಿಸಲು ಚೆನ್ನೈನ ಶೆರ್ಟಾನ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿಯ 16 ಮಂದಿ ಭಿನ್ನಮತೀಯ ಶಾಸಕರಿಗೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರು ಹೋಟೆಲ್ ಬಿಲ್ ಪಾವತಿಸಿರುವ ಅಂಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಶನಿವಾರ ಬಹಿರಂಗಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆನ್ನೈನ ಐಶಾರಾಮಿ ಶೆರ್ಟಾನ್ ರೆಸಾರ್ಟ್‌ನಲ್ಲಿ ತಂಗಿದ್ದ 16 ಮಂದಿ ಶಾಸಕರ 3,89, 596 ರೂ.ಗಳ ಬಿಲ್ ಅನ್ನು ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರು ಚೆಯರ್‌ಮೆನ್ ಆಗಿರುವ ಎಡಿಸಿ ಕಂಪನಿ ಮೂಲಕ ಪಾವತಿಸಿರುವುದ್ನು ದಾಖಲೆ ಸಹಿತ ಹೊರಹಾಕಿದರು.
ಆದರೆ ಕಾಂಗ್ರೆಸ್ ಪಕ್ಷದ ಮುಖಂಡರು ಮಾತ್ರ ಸರಕಾರ ಅಸ್ಥಿರಗೊಳಿಸಲು ತಮ್ಮ ಪಕ್ಷದ ಸಂಚು ಇಲ್ಲ, ಅದು ಅವರ ಪಕ್ಷದ ಶಾಸಕರ ಆಂತರಿಕ ವಿಷಯ ಎಂದು ಹೇಳುತ್ತಿದ್ದರು. ಈಗ ಕೇಂದ್ರ ಸಚಿವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಪಿತೂರಿಯನ್ನು ದಾಖಲೆ ಸಹಿತ ಹೊರಹಾಕಿದ್ದೇವೆ ಇದಕ್ಕೆ ಏನು ಹೇಳುತ್ತೀರಿ ಎಂದು ಈಶ್ವರಪ್ಪ ಅವರು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡರು.
ಆ ನಿಟ್ಟಿನಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇದರ ಬಗ್ಗೆ ಸತ್ಯಾಸತ್ಯತೆ ಅರಿಯಲು ಸಮಗ್ರ ತನಿಖೆ ನಡೆಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಕಾಂಗ್ರೆಸ್ ಮೊದಲಿನಿಂದಲೂ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿತ್ತು. ಹಾಗಾಗಿ ಜೆಡಿಎಸ್ ಜತೆ ಕೈಜೋಡಿಸಿ ವಾಮಮಾರ್ಗದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಂಡಿರುವುದಾಗಿ ವ್ಯಂಗ್ಯವಾಡಿದರು.
ಯಾವುದೇ ಕಾರಣಕ್ಕೂ ವಾಮಮಾರ್ಗದ ಮೂಲಕ ಅಧಿಕಾರದ ಕನಸು ಕಾಣಬೇಡಿ. ವಿರೋಧ ಪಕ್ಷದಲ್ಲಿ ಎರಡೂವರೆ ವರ್ಷಗಳ ಕಾಲ ಕುಳಿತು ಕೆಲಸ ಮಾಡಿ. ನಂತರ ಚುನಾವಣೆಯಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಎಂದು ಸವಾಲು ಹಾಕಿದರು.