ಚೆನ್ನೈ ಹೋಟೆಲ್‌ನಲ್ಲಿ ತಂಗಿದ್ದ ಬಿಜೆಪಿ ಅತೃಪ್ತ ಶಾಸಕರ ಬಿಲ್ಲನ್ನು ಕೇಂದ್ರ ಸಚಿವರೊಬ್ಬರ ಸಂಬಂಧಿ ಪಾವತಿ ಮಾಡಿದ್ದರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಆರೋಪಗಳಿಗೆ ಭಾನುವಾರದಂದು ಖಾರವಾಗಿಯೇ ಪ್ರತಿಕ್ರಿಯಿಸಿರುವ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವುದಕೋಸ್ಕರ ಇಂತಹ ಆರೋಪ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಇವೆಲ್ಲವೂ ಸುಳ್ಳು ದಾಖಲೆ. ಆ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಲು ಯತ್ನಿಸುತ್ತಿದ್ದಾರೆ. ಹಾಗಾಗಿ ಈಶ್ವರಪ್ಪ ಕ್ಷಮೆ ಕೇಳಬೇಕು ಎಂದು ಸಿದ್ದು ಒತ್ತಾಯ ಮಾಡಿದರು.
ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸಲು ನಾವೆಂದೂ ಪ್ರಯತ್ನಪಟ್ಟಿಲ್ಲ. ಈ ಹಿಂದೆಯೂ ಹಾಗೆ ಮಾಡಿಲ್ಲ, ಮುಂದೇನೂ ಮಾಡಲ್ಲ, ಇದೀಗಲೂ ಮಾಡುತ್ತಿಲ್ಲ ಎಂದವರು ಆಕ್ರೋಶ ಭರಿತರಾಗಿ ನುಡಿದರು.
ಇಂಥ ಹೇಯ ಆರೋಪ ಮಾಡಲು ನಾಚಿಕೆಯಾಗಲ್ಲ ನಿಮಗೆ? ಎಲ್ಲಾದರೂ ಮಾನ ಮಾರ್ಯಾದೆ ಇದೆಯೇ ನಿಮಗೆ? ಎಂದವರು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ದ ಪ್ರಶ್ನೆ ಹಾಕಿದರು.