ರವಿ, ವರ್ತೂರ್ ಸೇರಿ ನಾಲ್ವರಿಗೆ ಮಂತ್ರಿಗಿರಿ; ಮತ್ತೆ ಕಾನೂನು ತೊಡಕು?
ಮಡಿಕೇರಿ, ಸೋಮವಾರ, 1 ನವೆಂಬರ್ 2010( 13:29 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಂದಾದ ಬೆನ್ನಲ್ಲೇ, ಸಿಎಂ, ಸ್ಪೀಕರ್ ಹೊರತುಪಡಿಸಿ 205 ಶಾಸಕರಿದ್ದಾಗ ಸಚಿವ ಸಂಪುಟದಲ್ಲಿ 31 ಮಂದಿಗೆ ಅವಕಾಶ. ಹಾಗಾಗಿ ಸಂಪುಟ ವಿಸ್ತರಣೆಯಲ್ಲಿ ಮೂವರನ್ನು ಮಾತ್ರ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ತೊಡಕು ಎದುರಾಗಲಿದೆ ಎಂದು ಜೆಡಿಎಸ್ ಮುಖಂಡ ಎಂ.ಸಿ.ನಾಣಯ್ಯ ತಿಳಿಸುವ ಮೂಲಕ ಆಡಳಿತಾರೂಢ ಸರಕಾರ ಮತ್ತೊಂದು ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಶಾಸಕರಿದ್ದಾಗ ಸಿಎಂ ಸೇರಿ ಒಟ್ಟು 34 ಮಂದಿಗೆ ಸ್ಥಾನ. ಆದರೆ ಇದೀಗ ಶಾಸಕರ ಬಲ 205 ಇದ್ದು (ಸಿಎಂ, ಸ್ಪೀಕರ್ ಹೊರತುಪಡಿಸಿ), ಶೇ.15ರಷ್ಟು ಮಂದಿಗೆ ಮಂತ್ರಿಗಿರಿಗೆ ಅವಕಾಶ. ಹಾಗಾಗಿ ಸಚಿವ ಸಂಪುಟದಲ್ಲಿ 31 ಮಂದಿಗೆ ಮಾತ್ರ ಮಂತ್ರಿ ಸ್ಥಾನ ನೀಡಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ಬಿಜೆಪಿಯ ಅನರ್ಹ 11 ಮಂದಿ ಶಾಸಕರು, ಪಕ್ಷೇತರ ಐವರು ಮಂದಿ ಹಾಗೂ ರಾಜೀನಾಮೆ ನೀಡಿರುವ ವಿಪಕ್ಷಗಳ ಮೂವರು ಶಾಸಕರು ಸೇರಿ 19 ಮಂದಿ ಹೊರಗಿದ್ದಾರೆ. ಈಗ ವಿಧಾನಮಂಡಲದ ಶಾಸಕರ ಬಲ 205 ಇದೆ. ಸಂವಿಧಾನದ ಪ್ರಕಾರ ಶೇ.15ರಷ್ಟು ಮಾತ್ರ ಮಂತ್ರಿಗಿರಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಈಗಾಗಲೇ ಸಚಿವ ಸಂಪುಟದಲ್ಲಿ 28 ಮಂದಿ ಸಚಿವರಿದ್ದಾರೆ. ಆ ನಿಟ್ಟಿನಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಮೂವರಿಗೆ ಮಾತ್ರ ಅವಕಾಶ ನೀಡಬೇಕಾಗುತ್ತದೆ. ಅದಕ್ಕೆ ತಪ್ಪಿದರೆ ಅದು ರಾಜ್ಯಾಂಗದ ಉಲ್ಲಂಘನೆಯಾಗುತ್ತದೆ ಎಂದು ನಾಣಯ್ಯ ಎಚ್ಚರಿಸಿದ್ದಾರೆ.
ರವಿ, ವರ್ತೂರು ಸೇರಿ ನಾಲ್ವರು ಸಂಪುಟಕ್ಕೆ: ರಾಜಕೀಯ ಜಂಗೀಕುಸ್ತಿಯ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ತುಮಕೂರು ಕ್ಷೇತ್ರದ ಸೊಗಡು ಶಿವಣ್ಣ ಹಾಗೂ ಸುರಪುರ ಕ್ಷೇತ್ರದ ರಾಜು ಗೌಡ ಅವರು ಸಂಪುಟದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
ನವೆಂಬರ್ 3ರಂದು ಬೆಳಿಗ್ಗೆ ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ನಾಲ್ವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಜೀವರಾಜ್ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆದ ನಂತರ ಶೃಂಗೇರಿ ಶಾಸಕ ಜೀವರಾಜ್ ಅವರು ತಮಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಮೊದಲಿನಿಂದಲೂ ಸಚಿವಗಿರಿ ಆಕಾಂಕ್ಷಿಯಾಗಿರುವ ಜೀವರಾಜ್ ಸಾಕಷ್ಟು ಲಾಬಿ ನಡೆಸಿದ್ದರು. ಈ ಬಾರಿಯೂ ಸಂಪುಟದಲ್ಲಿ ಅವಕಾಶ ನೀಡದಿದ್ದರೆ, ಮುಖ್ಯ ಸಚೇತಕ ಹುದ್ದೆಗೆ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಏತನ್ಮಧ್ಯೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಜೀವರಾಜ್ ತಿಳಿಸಿದ್ದಾರೆ.