ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೆ ಬಂಡಾಯ; ಮುಖ್ಯ ಸಚೇತಕ ಸ್ಥಾನಕ್ಕೆ ಜೀವರಾಜ್ ರಾಜೀನಾಮೆ (BJP | Yeddyurappa | Cabinet | Jeevaraj | Chikka magalore | Ishwarappa)
ಮತ್ತೆ ಬಂಡಾಯ; ಮುಖ್ಯ ಸಚೇತಕ ಸ್ಥಾನಕ್ಕೆ ಜೀವರಾಜ್ ರಾಜೀನಾಮೆ
ಬೆಂಗಳೂರು, ಸೋಮವಾರ, 1 ನವೆಂಬರ್ 2010( 17:30 IST )
ಸಚಿವ ಸಂಪುಟ ವಿಸ್ತರಣೆಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವೆಂಬರ್ 3ರಂದು ಮುಹೂರ್ತ ಫಿಕ್ಸ್ ಮಾಡಿದ್ದ ಬೆನ್ನಲ್ಲೇ, ಮಂತ್ರಿಗಿರಿ ಆಕಾಂಕ್ಷಿ ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷದಲ್ಲಿ ಮತ್ತೆ ಬಂಡಾಯದ ಕಹಳೆ ಮೊಳಗಿದೆ.
ಸಚಿವ ಸ್ಥಾನ ನೀಡಿಲ್ಲ ಎಂಬ ಅಸಮಾಧಾನದಿಂದ ಜೀವರಾಜ್ ಅವರು ಮುಖ್ಯ ಸಚೇತಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.
ಸರಕಾರದ ಮುಖ್ಯ ಸಚೇತಕರೂ ಆಗಿರುವ ಡಿ.ಎನ್.ಜೀವರಾಜ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಏತನ್ಮಧ್ಯೆ, ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆಯಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಕೋಲಾರ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ತುಮಕೂರು ಕ್ಷೇತ್ರದ ಸೊಗಡು ಶಿವಣ್ಣ ಹಾಗೂ ಸುರಪುರ ಕ್ಷೇತ್ರದ ರಾಜು ಗೌಡ ಅವರಿಗೆ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ.
ನಾನು ಸಚಿವ ಸ್ಥಾನದ ಆಕಾಂಕ್ಷಿ, ನನ್ನ ರಾಜೀನಾಮೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ತಿಳಿಸಿದ್ದೇನೆ. ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ. ಅಲ್ಲದೇ, ಸಿ.ಟಿ.ರವಿಗೆ ಮಂತ್ರಿಗಿರಿ ಕೊಡುವ ಬಗ್ಗೆ ನನ್ನ ಅಭ್ಯಂತರವಿಲ್ಲ. ಶೃಂಗೇರಿ ಕ್ಷೇತ್ರಕ್ಕೆ ಆದ್ಯತೆ ನೀಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಮಂತ್ರಿಗಿರಿ ಸಿಗದಿದ್ದರೂ ಶಾಸಕ ಸ್ಥಾನ ಇದೆ ಎಂದು ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಜೀವರಾಜ್ ತಿಳಿಸಿದ್ದಾರೆ.