ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯ ಸರಕಾರದ ಅನುಮತಿ ವಾಪಸಾತಿ ಹಾಗೂ ಗೃಹ ಸಚಿವ ಆರ್.ಅಶೋಕ ಅವರ ಎಚ್ಚರಿಕೆಯ ನಡುವೆಯೂ ಸೋಮವಾರ ಕಪ್ಪು ಬಾವುಟ ಪ್ರದರ್ಶಿಸಿ, ರಿಬ್ಬನ್ ಪಟ್ಟಿಯನ್ನು ಕಟ್ಟಿಕೊಂಡು ಎಂಇಎಸ್ ಕಾರ್ಯಕರ್ತರು ಸೈಕಲ್ ರಾಲಿ ನೆಸಿ ಸಂಯುಕ್ತ ಮಹಾರಾಷ್ಟ್ರ 'ಝಾಲಾಚ್ ಪಾಯಿಜೆ' (ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲೇಬೇಕು) ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಸುಮಾರು 500 ಮಂದಿ ಎಂಇಎಸ್ ಕಾರ್ಯಕರ್ತರು ನಗರದ ಧರ್ಮವೀರ ಸಂಭಾಜಿ ಉದ್ಯಾನವನದ ಸಮೀಪ ಇಂದು ತಮ್ಮ ಶರ್ಟ್ ಮೇಲೆ ಕಬ್ಬು ರಿಬ್ಬನ್ ಪಟ್ಟಿ ಕಟ್ಟಿಕೊಂಡು, ಕೈಯಲ್ಲಿ ಕಪ್ಪು ಬಾವುಟಗಳನ್ನು ಹಿಡಿದು ಸೈಕಲ್ ರಾಲಿ ನಡೆಸಿದರು.
ಮೌನವಾಗಿಯೇ ಪ್ರತಿಭಟನೆ ನಡೆಸುತ್ತಿದ್ದ ಎಂಇಎಸ್ ಕಾರ್ಯಕರ್ತರು ನಂತರ ತಮ್ಮ ಕೈಯಲ್ಲಿದ್ದ ಕಪ್ಪು ಬಾವುಟಗಳನ್ನು ಮೇಲೆತ್ತಿ ಬೆಳಗಾವಿ, ಬೀದರ್, ಕಾರವಾರ ಸೇರಿದಂತೆ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದರು. ಬಳಿಕ ಎಂಇಎಸ್ ಕಾರ್ಯಕರ್ತರು ನಗರದ ಶಹಾಪುರ, ಟಿಳಕವಾಡಿ, ಗೋವಾವೇಸ್, ನಾಥಪೈ ಸರ್ಕಲ್, ಹಿಂದವಾಡಿ ಮೂಲಕ ಮರಾಠ ಮಂದಿರಕ್ಕೆ ಆಗಮಿಸಿದ್ದರು.
ರಾಜ್ಯ ಸರಕಾರ ಎಂಇಎಸ್ ಕರಾಳ ದಿನಾಚರಣೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿದ್ದರೂ ಕೂಡ ಎಂಇಎಸ್ ಕಾರ್ಯಕರ್ತರು ಝಾಲಾಜ್ ಪಾಯಿಜೆ ಎಂಬ ಘೋಷಣೆ ಕೂಗಿ ತಮ್ಮ ಕನ್ನಡ ವಿರೋಧಿ ನೀತಿಯನ್ನು ಮುಂದುವರಿಸಿದ್ದಾರೆ.