ಚೆನ್ನೈ ಶೆರ್ಟಾನ್ ರೆಸಾರ್ಟ್‌ನಲ್ಲಿ ಅತೃಪ್ತ ಬಿಜೆಪಿ ಶಾಸಕರು ತಂಗಿದ್ದ ಹೋಟೆಲ್ ಬಿಲ್ ಕಾಂಗ್ರೆಸ್ ಮುಖಂಡರೊಬ್ಬರ (ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ ) ಸಂಬಂಧಿಕರಿಂದಲೇ ಪಾವತಿಯಾಗಿದೆ ಎಂಬ ನನ್ನ ಹೇಳಿಕೆ ಸುಳ್ಳಾದರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಾವಿರ ಸುಳ್ಳು ಹೇಳಿದರೂ, ಕುಮಾರಸ್ವಾಮಿ ವಾಮಮಾರ್ಗದಲ್ಲಿ ನಡೆದರೂ, ಇನ್ನೂ ಸಾವಿರ ಭಾರದ್ವಾಜ್ ಬಂದರೂ ರಾಜ್ಯ ಸರಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಅತೃಪ್ತ ಬಿಜೆಪಿ ಶಾಸಕರು ತಂಗಿದ್ದ ರೆಸಾರ್ಟ್ ಬಿಲ್ ಅನ್ನು ಕಾಂಗ್ರೆಸ್ ಮುಖಂಡರ ಸಂಬಂಧಿಯೇ ಪಾವತಿ ಮಾಡಿದ್ದಾರೆ ಎಂಬ ಹೇಳಿಕೆಗೆ ನಾನು ಬದ್ದನಾಗಿದ್ದೇನೆ. ಇದು ಸುಳ್ಳು ಎನ್ನುವುದಾದರೆ ಸಿದ್ದರಾಮಯ್ಯ ಅವರು ದಾಖಲೆ ಸಹಿತ ಸಾಬೀತು ಮಾಡಬೇಕು. ಇಲ್ಲದೇ ಹೋದಲ್ಲಿ ಅವರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಯೇ ಎಂದು ಸವಾಲು ಹಾಕಿದ್ದಾರೆ.
ನಾನು ದಾಖಲೆ ಸಹಿತ ಆರೋಪ ಮಾಡಿದ್ದೇನೆ. ಅದೇ ರೀತಿ ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನ ಆರೋಪ ಸುಳ್ಳು ಎನ್ನುವುದಾದರೆ ಅವರು ಕೂಡ ಜನ ನಂಬುವಂತೆ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದರು.
ಬಿಲ್ ಪಾವತಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿ ಸರಕಾರವನ್ನು ಅಭದ್ರಗೊಳಿಸಲು ಕಾಣಿಕೆ ನೀಡಿದೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಮುಖಂಡರು ಹೇಳುವುದು ಒಂದು ಮಾಡುವುದು ಇನ್ನೊಂದು, ಅದಕ್ಕಾಗಿಯೇ ಜನರು ಇವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಟೀಕಿಸಿದರು.