ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೌಡರಿಂದ ಪ್ರಾಣಿ ಬಲಿ, ಮಗನಿಂದ ಶಾಸಕರ ಬಲಿ!: ಡಿವಿ (Sadananda Gowda | BJP | Deve gowda | JDS | Yeddyurappa)
Bookmark and Share Feedback Print
 
ಆಡಳಿತಾರೂಢ ಬಿಜೆಪಿ ಸರಕಾರ ಪತನವಾಗುತ್ತೆ, ಸಂಪುಟವನ್ನು ಮತ್ತೆ ವಿಸ್ತರಿಸಿದರೆ ಸರಕಾರ ಬಿದ್ದು ಹೋಗುತ್ತೆ ಎಂದು ಪದೇ, ಪದೇ ಭವಿಷ್ಯ ಹೇಳುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜ್ಯೋತಿಷ್ಯ ಶಾಲೆ ತೆರೆಯುವುದು ಒಳ್ಳೆಯದು ಎಂದು ಸಂಸದ ಡಿ.ವಿ.ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಹೇಳಿಕೆ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯ ಆಂತರಿಕ ವಿಚಾರಕ್ಕೆ ಕೈಹಾಕಲು ಇವರಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಈ ಹಿಂದೆ ಮಂಗಳೂರು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಪ್ರಾಣಿ ಬಲಿ ಕೊಟ್ಟಿದ್ದರು. ಇದೀಗ ಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕಾಗಿ 11 ಮಂದಿ ಬಿಜೆಪಿ ಶಾಸಕರನ್ನು ಬಲಿ ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಸರ್ಕಸ್ ನಡೆಸುತ್ತಿರುವ ಜೆಡಿಎಸ್‌ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದರ ಬದಲು ಕುತಂತ್ರದ ರಾಜಕೀಯ ಮಾಡುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಶಾಸಕರನ್ನು ಅನರ್ಹಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಆದರೆ ಕುಮಾರಸ್ವಾಮಿಯವರು, ತಾನು 11 ಮಂದಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಯವರೆಗೂ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಹಾಗಾಗಿ ಸರಕಾರವನ್ನು ಅಸ್ಥಿರಗೊಳಿಸುವಲ್ಲಿ ಕುಮಾರಸ್ವಾಮಿ ಪಾತ್ರ ಸ್ಪಷ್ಟವಾಗಿದೆ ಎಂದರು.

ಏನೇ ಹೋರಾಟ ಮಾಡಿದರೂ ಜೆಡಿಎಸ್, ಕಾಂಗ್ರೆಸ್‌ನಿಂದ ಬಿಜೆಪಿ ಸರಕಾರವನ್ನು ಉರುಳಿಸಲು ಸಾಧ್ಯವಿಲ್ಲ ಎಂದ ಗೌಡರು, ಇನ್ನು ಮುಂದಾದರು ಸರಕಾರದ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಲಿ ಎಂದು ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ