ಮಂತ್ರಿಗಿರಿಗಾಗಿ ಪೈಪೋಟಿ; ಸಂಪುಟ ವಿಸ್ತರಣೆ ದಿಢೀರ್ ಕ್ಯಾನ್ಸಲ್!
ಬೆಂಗಳೂರು, ಮಂಗಳವಾರ, 2 ನವೆಂಬರ್ 2010( 21:01 IST )
ರಾಜ್ಯ ರಾಜಕೀಯದಲ್ಲಿನ ಜಂಗೀಕುಸ್ತಿ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಮಂತ್ರಿಗಿರಿಗಾಗಿ ಆಕಾಂಕ್ಷಿಗಳ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ಸಚಿವ ಸಂಪುಟ ವಿಸ್ತರಣೆಯನ್ನು ಬಿಜೆಪಿ ದಿಢೀರ್ ಆಗಿ ರದ್ದುಪಡಿಸುವ ನಿರ್ಧಾರವನ್ನು ಕೈಗೊಂಡಿದೆ.
ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವೆಂಬರ್ 3ರಂದು ಮುಹೂರ್ತ ಫಿಕ್ಸ್ ಮಾಡಿದ್ದರು. ಆದರೆ ಹಲವು ಶಾಸಕರಿಂದ ಸಚಿವ ಸ್ಥಾನಕ್ಕಾಗಿ ಭಾರೀ ಒತ್ತಡ ಬರತೊಡಗಿತ್ತು. ಅಷ್ಟೇ ಅಲ್ಲ ಸಚಿವ ಸ್ಥಾನದ ಆಕಾಂಕ್ಷಿ ಶೃಂಗೇರಿ ಕ್ಷೇತ್ರದ ಶಾಸಕ ಜೀವರಾಜ್ ಅವರು ಮುಖ್ಯ ಸಚೇತಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಿಗೆ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಚಂದ್ರಕಾಂತ್ ಬೆಲ್ಲದ್ ಕೂಡ ಗಡಿನಾಡು ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಬುಧವಾರ ಬೆಳಿಗ್ಗೆ 9.30ಕ್ಕೆ ರಾಜಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮಾಧ್ಯಮಗಳಿಗೆ ಆಮಂತ್ರಣ ಪತ್ರಿಕೆ ಕಳುಹಿಸಿದ್ದರು. ಆದರೆ ಮಂಗಳವಾರ ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆ ರದ್ದು ಮಾಡಿರುವುದಾಗಿ ಫ್ಯಾಕ್ಸ್ ಮೂಲಕ ಮಾಧ್ಯಮಗಳಿಗೆ ಸಂದೇಶ ರವಾನಿಸಲಾಗಿತ್ತು.
ಒಟ್ಟಾರೆ ಮಂತ್ರಿಗಿರಿಗಾಗಿ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಳ್ಳುವ ಮೂಲಕ ಸಚಿವ ಸಂಪುಟ ವಿಸ್ತರಣೆ ದಿಢೀರ್ ಆಗಿ ರದ್ದಾಗಿದೆ. ಸಚಿವ ಸಂಪುಟ ವಿಸ್ತರಣೆ ಕುರಿತಂತೆ ನವದೆಹಲಿಯಲ್ಲಿ ವರಿಷ್ಠರ ಜೊತೆ ಚರ್ಚೆ ನಡೆಸಿದ ನಂತರ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ನಾಳೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಖಚಿತಪಡಿಸಿರುವ ಅವರು,ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರಿಗೆ ಆದ್ಯತೆ ಕೊಡಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಸಂಪುಟ ವಿಸ್ತರಣೆ ರದ್ದು-ಹೆಚ್ಚಿನ ವಿವರ ಗೊತ್ತಿಲ್ಲ-ಸಿಎಂ: ಬುಧವಾರ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯನ್ನು ರದ್ದು ಮಾಡಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ರದ್ದು ಮಾಡಿರುವ ಬಗ್ಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ ಎಂದು ಹೇಳುವ ಮೂಲಕ ಇಬ್ಬರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ಸಚಿವ ಸಂಪುಟ ರದ್ದು ವಿಚಾರ ಪಕ್ಷದ ರಾಜ್ಯಾಧ್ಯಕ್ಷರಿಗೆ ಬಿಟ್ಟ ವಿಚಾರ ಎಂದು ಅವರು ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈಶ್ವರಪ್ಪ ಅವರ ನಿರ್ಧಾರದ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದರು.
ಈ ಬಗ್ಗೆ ಈಶ್ವರಪ್ಪ ಅವರು ಮಂಗಳವಾರ ರಾತ್ರಿ ಸಮಾಲೋಚನೆ ನಡೆಸಿದ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಇದು ಸ್ವಾಗತಾರ್ಹ ವಿಚಾರ-ಧನಂಜಯ್ ಕುಮಾರ್: ಸಚಿವ ಸಂಪುಟ ವಿಸ್ತರಣೆ ದಿಢೀರ್ ಆಗಿ ರದ್ದುಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಧನಂಜಯ್ ಕುಮಾರ್, ಇದು ಪಕ್ಷದ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ನಿರ್ಧಾರವಾಗಿದೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದ ವರಿಷ್ಠರ ಜೊತೆ ಚರ್ಚಿಸುವುದು ಸ್ವಾಗತಾರ್ಹ ವಿಚಾರವಾಗಿದೆ ಎಂದರು.