'ರಾಜೀನಾಮೆ ಕೊಟ್ರೆ ಒಳ್ಳೇದು; ಎಲ್ಲರೂ ಮಂತ್ರಿ ಆಗಲು ಆಗಲ್ಲ'
ಮೈಸೂರು, ಬುಧವಾರ, 3 ನವೆಂಬರ್ 2010( 15:29 IST )
NRB
'ಬಿಜೆಪಿ ಶಿಸ್ತಿನ ಪಕ್ಷ. ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸೋಲ್ಲ. ಶಾಸಕರಾಗಿ ಆಯ್ಕೆಯಾದವರೆನ್ನೆಲ್ಲ ಮಂತ್ರಿ ಮಾಡಲು ಸಾಧ್ಯವಿಲ್ಲ. ಅದು ಆಗಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಿ ಎಂದಾದರೆ ನಾನು ಅದನ್ನು ಸ್ವಾಗತಿಸುತ್ತೇನೆ'...ಇದು ಮಂತ್ರಿಗಿರಿ ಆಕಾಂಕ್ಷಿಗಳು ಸೇರಿದಂತೆ ಭಿನ್ನಮತೀಯ ಶಾಸಕರಿಗೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಖಡಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಬುಧವಾರ ಸಾಂಸ್ಕೃತಿಕ ನಗರಿ ಮೈಸೂರಿನ ರಾಜೇಂದ್ರ ಕಲ್ಯಾಣ ಮಂಟದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷ, ಆ ಶಿಸ್ತನ್ನು ಉಳಿಸಲು ಕಾರ್ಯಕರ್ತರು ಕೂಡ ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಪಕ್ಷದ ಶಿಸ್ತನ್ನು ಉಲ್ಲಂಘಿಸಿದರೆ ಅದಕ್ಕೆ ತಕ್ಕ ಪ್ರತಿಫಲ ಉಣ್ಣಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಒಂದು ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಿ ಎಂದಾದರೆ ನಾನು ಅದನ್ನು ಸ್ವಾಗತಿಸುತ್ತೇನೆ. ಆದರೆ ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ನಿಮ್ಮ ಗೆಲುವಿಗಾಗಿ ಶ್ರಮಿಸಿದ ಕ್ಷೇತ್ರದ ಕಾರ್ಯಕರ್ತರನ್ನ ನೆನಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಕುರಿತು ಮಾತುಕತೆ ನಡೆಯಿತು. ಅಲ್ಲದೇ, ಪಕ್ಷದೊಳಗೆ ತಲೆದೋರಿದ ಭಿನ್ನಮತ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವಾರು ಮಹತ್ವದ ಅಂಶಗಳ ಬಗ್ಗೆ ಚರ್ಚೆ ನಡೆಯಿತು.
ಸಭೆಗೆ ರೆಡ್ಡಿ, ಅನಂತ್ ಕುಮಾರ್ ಗೈರು: ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಮುಖಂಡರು ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಇಂದು ನಡೆದ ಕಾರ್ಯಕಾರಣಿ ಸಭೆಗೆ ಪಕ್ಷದ ಪ್ರಮುಖರೇ ಗೈರು ಹಾಜರಾಗುವ ಮೂಲಕ ಪಕ್ಷದೊಳಗಿನ ಭಿನ್ನಮತ ಬಟಾಬಯಲಾಗಿದೆ.
ಬಿಜೆಪಿ ಕಾರ್ಯಕಾರಿಣಿ ಸಭೆಗೆ ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಅಪ್ಪಚ್ಚು ರಂಜನ್, ಸಂಸದ ಅನಂತ್ ಕುಮಾರ್, ಚಂದ್ರಕಾಂತ್ ಬೆಲ್ಲದ್, ಎಂ.ಪಿ.ಕುಮಾರಸ್ವಾಮಿ, ಜೀವರಾಜ್ ಗೈರು ಹಾಜರಾಗಿದ್ದಾರೆ. ಒಟ್ಟಾರೆ ಸಚಿವ ಸಂಪುಟ ವಿಸ್ತರಣೆ ದಿಢೀರ್ ಆಗಿ ರದ್ದುಗೊಳಿಸಿರುವುದು ರೆಡ್ಡಿ ಬಣಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಏತನ್ಮಧ್ಯೆ ಅತೃಪ್ತ ಶಾಸಕರು ಹಾಗೂ ರೆಡ್ಡಿ ಬಣದ ಮನವೊಲಿಸಲು ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆನ್ನಲಾಗಿದೆ. ಆದರೆ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಿ.ಟಿ.ರವಿ ಹಾಗೂ ಸೊಗಡು ಶಿವಣ್ಣ ಅವರಿಗೆ ಸ್ಥಾನ ಕೊಡಲೇಬೇಕೆಂಬ ಹಠ ಈಶ್ವರಪ್ಪ ಅವರದ್ದಾಗಿದೆ. ಅಂತೂ ಆಡಳಿತಾರೂಢ ಬಿಜೆಪಿ ಪಕ್ಷದೊಳಗಿನ ಆಂತರಿಕ ಕಚ್ಚಾಟ ಸದ್ಯಕ್ಕೆ ಬಗೆಹರಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಎಂಬುದು ಸ್ಪಷ್ಟವಾಗತೊಡಗಿದೆ.