ಪಕ್ಷದಲ್ಲಿ ಭಿನ್ನಮತ, ಮಂತ್ರಿಗಿರಿಗಾಗಿ ಒತ್ತಾಯ, ಶಾಸಕರು ಪದೇ,ಪದೇ ಉಂಟುಮಾಡುತ್ತಿರುವ ಗೊಂದಲಗಳನ್ನು ಗಮನಿಸಿದರೆ ಯಾವ ಪುರುಷಾರ್ಥಕ್ಕಾಗಿ ಅಧಿಕಾರದಲ್ಲಿರಬೇಕು ಎಂಬ ಪ್ರಶ್ನೆ ನನಗೆ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಷಾದವನ್ನು ವ್ಯಕ್ತಪಡಿಸಿದರು.
ಮೈಸೂರಿನ ರಾಜೇಂದ್ರ ಕಲಾ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಅಪೇಕ್ಷೆ ನಮ್ಮ ನಾಯಕರುಗಳ ಮೇಲಿದೆ. ಅದರಿಂದ ನಾಯಕರುಗಳ ಮಾರ್ಗದರ್ಶನದಲ್ಲಿ ಬಿಜೆಪಿಯ ಎಲ್ಲ ಸಚಿವರು, ಶಾಸಕರು, ಮುಖಂಡರು, ಹಾಗೂ ಕಾರ್ಯಕರ್ತರು ನಡೆದುಕೊಳ್ಳಬೇಕಿದೆ ಎಂದರು.
ನಾವು ಸರಿದಾರಿಯಲ್ಲಿ ನಡೆದರೆ, ರಾಜ್ಯವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಬಹುದು. ರಾಷ್ಟ್ರದಲ್ಲೇ ಈಗ ಅಭಿವೃದ್ಧಿಯಲ್ಲಿ 2ನೇ ಸ್ಥಾನದಲ್ಲಿರುವ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಬಹುದು. ಅದಕ್ಕಾಗಿ ಇನ್ನುಳಿದಿರುವ ಎರಡೂವರೆ ವರ್ಷಗಳನ್ನು ಮೀಸಲಿಟ್ಟಿದ್ದೇವೆ. ದಯವಿಟ್ಟು ಎಲ್ಲರೂ ಸಹಕರಿಸಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಪ್ರತಿಪಕ್ಷಗಳ ಟೀಕೆ, ಟಿಪ್ಪಣಿಗಳಿಗೆ ಹೆದರದೆ ಅಭಿವೃದ್ಧಿಯತ್ತ ಗಮನಹರಿಸಿ ಎಂದು ಹೇಳಿದರು.