ದೇಶದ ಇತಿಹಾಸದಲ್ಲಿಯೇ ನಾಲ್ಕು ದಿನಗಳಲ್ಲಿಯೇ ಎರಡು ಬಾರಿ ವಿಶ್ವಾಸಮತ ಯಾಚನೆ ಮಾಡಿ ಸಫಲರಾದ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು ಹೆಚ್ಚಿನ ಹೊಣೆಗಾರಿಕೆಯು ಹೆಗಲ ಮೇಲಿದೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಕಹಿ ಘಟನೆಗಳಿಂದ ರಾಜ್ಯದ ಜನತೆಗೆ ರಾಜಕಾರಣಿಗಳ ಮೇಲಿನ ವಿಶ್ವಾಸವು ಕುಂದಿದೆ. ಜನರ ವಿಶ್ವಾಸವನ್ನು ಮತ್ತೆ ಪಡೆಯಲು ಸರ್ಕಾರವು ತ್ವರಿತ ವೇಗದಲ್ಲಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ಬುಧವಾರ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಕೈಗೊಂಡ ನಿರ್ಧಾರ.
ಜನಪರ ಕಾರ್ಯಕ್ರಮಗಳನ್ನು ಮತ್ತು ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಸರ್ಕಾರವು ಇನ್ನೂ ಹೆಚ್ಚಿನ ಬದ್ದತೆಯಿಂದ ತೊಡಗಿಸಕೊಳ್ಳಬೇಕಾಗಿದೆ. ಮುಂಬರುವ ದಿನಗಳಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೆ ವಿಳಂಬವನ್ನು ಸಹಿಸದೆ ಕಾಲಬದ್ದ ಮಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರೈಸಲು ತನ್ನ ಗಮನವನ್ನು ಸರ್ಕಾರವು ಸಂಪೂರ್ಣವಾಗಿ ಕೇಂದ್ರಿಕರಿಸುವುದು ಸೂಕ್ತ ಎಂಬ ಅಭಿಪ್ರಾಯಕಾರ್ಯಾಕಾರಿಣಿ ಸಭೆಯಲ್ಲಿ ವ್ಯಕ್ತವಾಯಿತು.
ಸರ್ಕಾರವು ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಹೊಸ ಸವಾಲನ್ನು ಎದುರಿಸಲು ಸಜ್ಜಾಗಬೇಕಿದೆ. ಕಳೆದ ವರ್ಷ ರಾಜ್ಯದ ಇತಿಹಾಸದಲ್ಲಿ ಕಂಡರಿಯದ ನೆರೆಯಿಂದ ಲಕ್ಷಾಂತರ ಸಂತ್ರಸ್ತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರ್ವಸಿತರಿಗೆ ನಿರ್ಮಿಸಿಬೇಕಿದ್ದ ಆಸರೆ ಮನೆಗಳ ನಿರ್ಮಾಣದಲ್ಲಿ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರವು ಈ ಸಂತ್ರಸ್ತರ ಬವಣೆಯನ್ನು ನೀಗಲು ಅತಿ ಶೀಘ್ರದಲ್ಲಿ ಮನೆಗಳನ್ನು ನೀಡಲು ಶಕ್ತಿಮೀರಿ ಪ್ರಯತ್ನಿಸಬೇಕು. ಹಾಗೂ ಮನೆಗಳ ನಿರ್ಮಾಣಕ್ಕೆ ಉಂಟಾಗಿರುವ ಅಡ್ಡಿ ಆತಂಕಗಳನ್ನು ನಿವಾರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಪಕ್ಷದ ಮುಖಂಡರು ನಿರ್ಣಯ ಕೈಗೊಂಡರು.
ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ನಡೆಯಲಿದೆ. ತಳಮಟ್ಟದ ಕಾರ್ಯಕರ್ತರಿಗೆ ಅಧಿಕಾರ ಪ್ರಾಪ್ತಿಯಾಗುವ ಈ ಚುನಾವಣೆಗಳು ರಾಜ್ಯದಲ್ಲಿ ಬಿಜೆಪಿಗೆ ಭದ್ರಬುನಾದಿ ಹಾಕಲು ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ.
ಈ ಚುನಾವಣೆಯಲ್ಲಿ ಕಳೆದ 3೦ ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಸಾಧನೆಗಳೆ ನಮಗೆ ಶ್ರೀ ರಕ್ಷೆಯಾಗಲಿದೆ. ಬಿಜೆಪಿ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಹಾಗೂ ಈಗಾಗಲೇ ಇದಕ್ಕೆ ಪೂರಕವಾಗಿ ಪಕ್ಷದ ವಿವಿಧ ಸ್ತರದಲ್ಲಿ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಲು ಕಾರ್ಯಪ್ರವೃತ್ತವಾಗಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಸಭೆಯಲ್ಲಿ ತಿಳಿಸಲಾಯಿತು.