ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರಗಳ ಮೀಸಲಿನಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಜೆಡಿಎಲ್‌ಪಿ ನಾಯಕ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಎರಡು, ಹೊಳೆನರಸೀಪುರ ತಾಲೂಕಿನಲ್ಲಿ ಮೂರು, ಚನ್ನರಾಯಪಟ್ಟಣದಲ್ಲಿ ಒಂದು ಸೇರಿ ಒಟ್ಟು ಐದು ಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳನ್ನಾಗಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಚುನಾವಣಾ ಮಾರ್ಗಸೂಚಿ ನಿರ್ಲಕ್ಷಿಸಿ, ಬಿಜೆಪಿಗೆ ಅನುಕೂಲವಾಗುವ ರೀತಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಭಾವಿ ಸಚಿವರ ಮನೆಯಲ್ಲಿ ರಾಜ್ಯದ ಜಿ.ಪಂ.ಕ್ಷೇತ್ರದ ಮೀಸಲು ಪಟ್ಟಿ ಸಿದ್ಧವಾಗುತ್ತಿದೆ ಎಂದು ದೂರಿದರು.
ತಮ್ಮ ವಿರುದ್ಧ ದ್ವೇಷ ರಾಜಕಾರಣಕ್ಕಾಗಿ ಮೀಸಲಿನಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಜೆಡಿಎಸ್ ನಿಯೋಗ ಚುನಾವಣೆ ಆಯೋಗಕ್ಕೆ ಮನವರಿಕೆ ಮಾಡಲಿದೆ ಎಂದು ಹೇಳಿದರು. ಮೀಸಲು ನಿಗದಿ ಸಂದರ್ಭ ಕಳೆದ ಐದು ವರ್ಷದ ಪಟ್ಟಿ ಪರಿಶೀಲಿಸಿ ನಿಗದಿಪಡಿಸಬೇಕು. ತಮಗೆ ಅನುಕೂಲವಾಗುವ ರೀತಿ ಅಕಾರ ದುರ್ಬಳಕೆ ಮಾಡಿಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಮಾಡಿದಂತೆ ಎಂದರು.