ರಾಜ್ಯಾದ್ಯಂತ ಗಮನ ಸೆಳೆದಿದ್ದ ಮೈಸೂರಿನ ಬದನವಾಳು ದಲಿತರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ 20 ಆರೋಪಿಗಳಿಗೆ ನಗರದ 6ನೆ ಹೆಚ್ಚುವರಿ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ.
ಸುಮಾರು 17 ವರ್ಷಗಳ ಕಾಲ ಸುದೀರ್ಘ ವಿಚಾರಣೆಯ ನಂತರ 20 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 15 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಘಟನೆಯಲ್ಲಿ ಕೊಲೆಗೀಡಾದ ವ್ಯಕ್ತಿಗಳ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ನ್ಯಾಯಾಧೀಶ ಎಂ.ಎಫ್.ಮಳವಳ್ಳಿ ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ 23 ಮಂದಿಯ ವಿರುದ್ಧದ ಆರೋಪ ಸಾಬೀತಾಗಿತ್ತು. ಆದರೆ ಮೂವರು ಆರೋಪಿಗಳು ಮೃತಪಟ್ಟಿರುವುದರಿಂದ 20 ಮಂದಿಗೆ ಶಿಕ್ಷೆ ವಿಧಿಸಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಪುರಾತನ ಸಿದ್ದಪ್ಪಾಜಿ ದೇವಾಲಯಕ್ಕೆ ದಲಿತರು ಪ್ರವೇಶಿಸುವುದಕ್ಕೆ ಸವರ್ಣಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ದೇವಾಲಯದ ಜೀರ್ಣೋದ್ಧಾರಕ್ಕೆ ಪ್ರವೇಶ ನೀಡುವುದಾದರೆ ಮಾತ್ರ ದೇಣಿಗೆ ನೀಡುವುದಾಗಿ ದಲಿತರು ಷರತ್ತು ಹಾಕಿದ್ದರು. ಆದರೆ ಸವರ್ಣಿಯರು ದಲಿತರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪರಿಸ್ಥಿತಿ ಪ್ರಕ್ಷೋಭೆಗೆ ತಿರುಗಿತ್ತು.
ಈ ಘಟನೆಯ ಪರಿಣಾಮ ಎಂಬಂತೆ 1993 ಮಾರ್ಚ್ 25ರಂದು ಬದನವಾಳು ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಸದಸ್ಯರು ಸೌಹಾರ್ದತಯುತ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಭಾಗವಹಿಸುವ ಸಲುವಾಗಿ ಸಮೀಪದ ಹನಿಯಂಬಳ್ಳಿ ಗ್ರಾಮಕ್ಕೆ ತೆರಳಿದ್ದರು. ಇವರೆಲ್ಲ ಪಂದ್ಯಾವಳಿ ಮುಗಿಸಿ ಹಿಂದಿರುಗುವ ವೇಳೆ ದೇವನೂರು ಬದನವಾಳು ಗ್ರಾಮಗಳ ಮಧ್ಯೆ ಇರುವ ಹಳ್ಳವೊಂದರಲ್ಲಿ ಅಡಗಿ ಕುಳಿತಿದ್ದ ಸವರ್ಣೀಯರ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಶಿಕ್ಷಕ ನಾರಾಯಣಸ್ವಾಮಿ, ಅವರ ಮಗ ಮಧುಕರ ಹಾಗೂ ಮತ್ತೊಬ್ಬ ಶಿಕ್ಷಕ ನಟರಾಜು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಇಬ್ಬರು ಗಾಯಗೊಂಡಿದ್ದರು.
ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆದರೆ ಪ್ರಕರಣವನ್ನು ಸಿಬಿಐಗೆ ಒತ್ತಾಯಿಸಬೇಕೆಂಬ ಆಗ್ರಹಕ್ಕೆ ಮಣಿದ ಅಂದಿನ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಸಿಬಿಐ ತನಿಖೆಗೆ ವಹಿಸಿದ್ದರು.