ಬಿಜೆಪಿ ಗೆಲುವು ತಡೆಯಲು ಸಾಧ್ಯವಿಲ್ಲ: ಯಡಿಯೂರಪ್ಪ ವಿಶ್ವಾಸ
ಮೈಸೂರು, ಗುರುವಾರ, 4 ನವೆಂಬರ್ 2010( 13:37 IST )
ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಹೋಗುವುದರಿಂದ ಪಕ್ಷಕ್ಕೆ ಶೇ. 70ರಷ್ಟು ಗೆಲುವು ಲಭಿಸಲಿದೆ ಎಂದು ಭವಿಷ್ಯ ನುಡಿದರು.
ಮಂತ್ರಿಗಿರಿ ಬಗ್ಗೆ ಆಲೋಚನೆ ನಡೆಸದೆ, ಚುನಾವಣೆ ಬಗ್ಗೆ ಗಮನಹರಿಸಿ. ಟಿಕೆಟ್ ನೀಡುವಾಗ, 10 ಬಾರಿ ಯೋಚಿಸಿ, ಪ್ರಾಮಾಣಿಕರಿಗೆ ನೀಡಿ ಎಂದು ಶಾಸಕರಿಗೆ ಸಲಹೆ ನೀಡಿದರು. ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಖಾತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಕಾರ್ಯಕಾರಿ ಸದಸ್ಯರು ಸಚಿವರೊಂದಿಗೆ ಸಂವಾದ ನಡೆಸಿದರು.
ಸಭೆಯ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ನೀಡಿದ ಮುಖಂಡ ಸಿ.ಟಿ.ರವಿ, 'ಪಂಚಾಯತ್ ಸಂಸ್ಥೆಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು. ಸೂಕ್ತ ತಿದ್ದುಪಡಿ ತರಲು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.