ಕಾಂಗ್ರೆಸ್ ನಾಯಕ ಕೆ.ಸಿ. ಕೊಂಡಯ್ಯ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ, ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 18ರಂದು ವಿಚಾರಣೆಗಾಗಿ ಖುದ್ದಾಗಿ ಹಾಜರಾಗುವಂತೆ ಆದೇಶ ಹೊರಡಿಸಿದೆ.
ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕರಾದ ಕೊಂಡಯ್ಯ ರಾಜ್ಯಪಾಲರಿಗೆ ದೂರು ನೀಡಿದ್ದರಲ್ಲದೆ ವಿಧಾನಸಭೆ ಸದ್ಯಸತ್ವದಿಂದ ರೆಡ್ಡಿ ಸೋದರರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿದ್ದರು. ಗಣಿಗಾರಿಕೆ ಚಟುವಟಿಕೆಗಾಗಿ ರೆಡ್ಡಿ ಸೋದರರು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯಪಾಲರಿಗೆ ಹಸ್ತಾಂತರಿಸಿದ್ದರು. ಇದೀಗ ತನಿಖೆ ಕೈಗೆತ್ತಿಕೊಂಡಿರುವ ಆಯೋಗ ನೋಟಿಸ್ ಜಾರಿ ಮಾಡಿದೆ.
ಈ ಹಿಂದೆ ಲಾಭದಾಯಕ ಹುದ್ದೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ರಾಜ್ಯಪಾಲ ಭಾರದ್ವಾಜ್, ರೆಡ್ಡಿ ಸೋದರರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದ್ದ ರೆಡ್ಡಿ ಸೋದರರರು ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು.
ಇದೀಗ ರೆಡ್ಡಿಗಳ ವರ್ತನೆಯಿಂದ ತೀವ್ರ ಅಸಮಾಧಾನಗೊಂಡಿರುವ ರಾಜ್ಯಪಾಲರು ಪ್ರಕರಣವನ್ನು ಚುನಾವಣಾ ಆಯೋಗಕ್ಕೆ ರವಾನಿಸಿದ್ದರು. ರೆಡ್ಡಿಗಳು ಮತ್ತು ಅವರ ಸಂಪರ್ಕ ಹೊಂದಿರುವವರ ಮನೆ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ದಾಳಿ ನಡೆದಿರುವ ಬೆನ್ನಲ್ಲೇ ಚುನಾವಣಾ ಆಯೋಗದ ನೋಟಿಸ್ ಜಾರಿಗೊಂಡಿದೆ.