ಹಲವು ಗೊಂದಲಗಳ ನಡುವೆಯೂ ಸಚಿವ ಸಂಪುಟ ವಿಸ್ತರಣೆಗೆ ರಾಜ್ಯ ಸರಕಾರ ಮುಂದಾಗಿದ್ದು, ಮುಂದಿನ 15 ದಿನಗಳೊಳಗೆ ಸಚಿವ ಸಂಪುಟದ ವಿಸ್ತರಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಹೇಳಿಕೆ ನೀಡಿರುವ ಈಶ್ವರಪ್ಪ ಮುಂದಿನ 15 ದಿನದೊಳಗೆ ಸಂಪುಟಕ್ಕೆ ಸರ್ಜರಿ ನಡೆಯಲಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಈ ಬಗ್ಗೆ ರಾಷ್ಟ್ರೀಯ ನಾಯಕ ನಿತಿನ್ ಗಡ್ಕರಿ ಜತೆ ಚರ್ಚೆ ನಡೆಸಿದ್ದೇನೆ. ರಾಜ್ಯದಲ್ಲಿ ಪ್ರಸಕ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮನವರಿಕೆ ಮಾಡಿದ್ದೇನೆ ಎಂದವರು ತಿಳಿಸಿದರು. ಹಾಗೆಯೇ ಜೆಡಿಎಸ್-ಕಾಂಗ್ರೆಸ್ ಹುನ್ನಾರದ ಬಗ್ಗೆಯೂ ಅವರಿಗೆ ತಿಳಿಸಿದ್ದೇನೆ ಎಂದವರು ಹೇಳಿದರು.
ಸಿದ್ದು ವಿರುದ್ಧ ವಾಗ್ದಾಳಿ... ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಈಶ್ವರಪ್ಪ, ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದು ಅನರ್ಹ ಎಂದು ಕಿಡಿ ಕಾರಿದ್ದಾರೆ. ಶಿವಮೊಗ್ಗದಲ್ಲಿ ನೀಡಿದ ಬಹಿರಂಗ ಹೇಳಿಕೆಯಲ್ಲಿ ಸಿದ್ದು ವಿರುದ್ಧ ಈಶ್ವರಪ್ಪ ಕಿಡಿ ಕಾರಿದ್ದಾರೆ.
ಶಾಸಕರಿಗೆ ಎಚ್ಚರಿಕೆ... ಅದೇ ಹೊತ್ತಿಗೆ ಪಕ್ಷದ ಶಾಸಕರಿಗೂ ಈಶ್ವರಪ್ಪ ಎಚ್ಚರಿಕೆ ರವಾನಿಸಿದ್ದು, ಮಾಧ್ಯಮಗಳಿಗೆ ಯಾವುದೇ ಬಹಿರಂಗ ಹೇಳಿಕೆ ನೀಡುವಂತಿಲ್ಲ. ಒಂದು ವೇಳೆ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.