ಕೆಲವೇ ದಿನಗಳಲ್ಲಿ ರಾಜ್ಯ ಸರಕಾರ ಬೀಳೋದು ನೂರಕ್ಕೆ ನೂರು ಗ್ಯಾರಂಟಿ ಎಂದು ಉಪ ಸಭಾಪತಿ ಪುಟ್ಟಣ್ಣ ಭವಿಷ್ಯ ನುಡಿದರು.
ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಸರಕಾರ ಸ್ಥಿರವಾಗಿಲ್ಲ. ಮೊನ್ನೆ ತಾನೇ ಸರಕಾರ ಬೀಳಬೇಕಿತ್ತು. ಅದೃಷ್ಟವಶಾತ್ ಉಳಿಯಿತು. ಆದರೆ, ಎಂದಿದ್ದರೂ ಬೀಳುವ ಮರ ಎಂದರು.
ಶಿಕ್ಷಣ ಸಚಿವ ಕಾಗೇರಿ ಅವರನ್ನು ಕಾಗೆ, ಗೂಬೆ ಎಂದು ಜರೆದರೂ ಮಾನ ಇಲ್ಲದವರಂತೆ ಕುರ್ಚಿಗೆ ಅಂಟಿಕೊಂಡೇ ಕುಳಿತಿದ್ದಾರೆ. ನಾನವರನ್ನು ಬೈದಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಬೇಕಿತ್ತು. ಇಲ್ಲವೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿತ್ತು. ಆದರೆ ಇವೆರಡನ್ನೂ ಮಾಡದ ಕಾಗೇರಿಯಂಥ ಸಚಿವರಿಂದ ಶಿಕ್ಷಕರ ಯಾವ ಸಮಸ್ಯೆಗಳೂ ಪರಿಹಾರವಾಗಲು ಸಾಧ್ಯ ವಿಲ್ಲ ಎಂದು ಟೀಕಿಸಿದರು.
ರಾಜಕೀಯ ಸಮತೋಲನ ಕಾಪಾಡುವ ಉದ್ದೇಶದಿಂದ ಮಾತ್ರ ನಾನಿಂದು ಉಪಸಭಾಪತಿಯ ಸ್ಥಾನದಲ್ಲಿ ಕುಳಿತಿದ್ದೇನೆ. ಡಿಸೆಂಬರ್‌ನಲ್ಲಿ ಅವರೇ ನನ್ನನ್ನು ಹುದ್ದೆಯಿಂದ ತೆರವುಗೊಳಿಸುತ್ತಾರೆ ಎಂದು ಪುಟ್ಟಣ್ಣ ಹೇಳಿದರು.
ಉಪ ಸಭಾಪತಿ ಆದ ನಂತರ ಹೋರಾಟ ಮನೋಭಾವ ಮೆದುವಾಗಿದೆ. ಶಿಕ್ಷಕರ ಪರ ಧ್ವನಿ ಎತ್ತುತ್ತಿಲ್ಲ ಎಂಬ ಆರೋಪವಿದೆ. ಇದೆ. ಅದು ನಿಜ. ಆದರೆ ನಾನೇನು ಮಾಡಲಿ ಈ ಸ್ಥಾನವೇ ಅಂಥದ್ದು ಎಂದರು.