ನಗರ ಅಭಿವೃದ್ದಿ ಕಾಮಗಾರಿಗಳಿಗೆ ಅನುವಾಗುವಂತೆ ತುಂಡು ಗುತ್ತಿಗೆಗೆ ಅನುಮತಿ ನೀಡುವ ನಿರ್ಧಾರವನ್ನು ಪುನರ್ಪರೀಶೀಲಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಮೇಯರ್ ಎಸ್.ಕೆ. ನಟರಾಜ್ ತಿಳಿಸಿದ್ದಾರೆ.
ತುಂಡು ಗುತ್ತಿಗೆ ಕಾಮಗಾರಿಯನ್ನು 5, 25, 50 ಲಕ್ಷ ರೂ.ಗಳಲ್ಲಿ ನೇರ, ಇ-ಟೆಂಡರ್, ಇ-ಪ್ರೊಕ್ಯೂರ್ಮೆಂಟ್ ಮೂಲಕ ಕೈಗೊಳ್ಳಲು ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ, ಇದಕ್ಕೆ ಸರಕಾರ ಅನುಮತಿ ನೀಡಿಲ್ಲ. ಆದ್ದರಿಂದ ಇದರ ಅಗತ್ಯ ಕುರಿತು ಮನವರಿಕೆ ಮಾಡಿಕೊಡಲಾಗುತ್ತದೆ. ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಳ್ಳಲಾಗುತ್ತದೆ ಎಂದರು.
ಬಿಬಿಎಂಪಿಗೆ 20 ನಾಮ ನಿರ್ದೇಶಿತ ಸದಸ್ಯರನ್ನು ಮುಂದಿನ ವಾರದಲ್ಲಿ ಪ್ರಕಟಿಸಲಾಗುತ್ತದೆ. ಬಿಡಿಎಗೆ ಇಬ್ಬರು ಸದಸ್ಯರನ್ನು ಕಳುಹಿಸುವ ಪ್ರಕ್ರಿಯೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ನಡೆಯಲಿದೆ ಎಂದು ಮೇಯರ್ ತಿಳಿಸಿದರು.
ಬಿಬಿಎಂಪಿಯಲ್ಲಿ ಒಟ್ಟಾರೆ 12 ಸ್ಥಾಯಿ ಸಮಿತಿಗಳೂ ಅಸ್ತಿತ್ವಕ್ಕೆ ಬಂದಿರುವುದರಿಂದ ಅಭಿವೃದ್ದಿ ಚಟುವಟಿಕೆಗಳು ಇನ್ನು ಮುಂದೆ ಚುರುಕುಗೊಳ್ಳಲಿವೆ. ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧ್ಯಕ್ಷರು ಶ್ರಮಿಸಬೇಕೆಂದು ಮೇಯರ್ ಕರೆ ನೀಡಿದರು.
ಬೆಂಗಳೂರು ನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಲು ಎಲ್ಲರೂ ಶ್ರಮಿಸಬೇಕು. ಸ್ಥಾಯಿ ಸಮಿತಿ ಅಧ್ಯಕ್ಷರು ಈ ನಿಟ್ಟಿನಲ್ಲಿ ಹೆಚ್ಚಿನ ಯೋಜನೆಗಳಿಗೆ ಮುಂದಾಗಬೇಕು. ಸದಸ್ಯರು ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು.