ಕೂಡಿಗಿ ವಿದ್ಯುತ್‌ನಲ್ಲಿ ಬಹುಪಾಲು ರಾಜ್ಯಕ್ಕೆ ಮೀಸಲು: ಸಿಎಂ
ಬೆಂಗಳೂರು, ಭಾನುವಾರ, 7 ನವೆಂಬರ್ 2010( 16:29 IST )
NRB
ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೂಡಿಗಿ ಸ್ಥಾವರದಲ್ಲಿ ಉತ್ಪಾದನೆಯಾಗುವ ವಿದ್ಯುತ್ನಲ್ಲಿ ಶೇ. 80ರಷ್ಟನ್ನು ರಾಜ್ಯದ ಬಳಕೆಗೆ ಮೀಸಲಿಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಕೂಡಿಗಿಯಲ್ಲಿ ನಾಲ್ಕು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪನೆಯಾಗಲಿದ್ದು, ರಾಜ್ಯ ಸರಕಾರ ಎನ್‌ಟಿಪಿಸಿ ಲಿಮಿಟೆಡ್ ಜತೆ ಖರೀದಿ ಒಡಂಬಡಿಕೆ ಮಾಡಿಕೊಂಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಬಳಿಕ ಮಾತನಾಡಿದ ಮುಖ್ಯಮಂತ್ರಿಯವರು, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಗಳ ಅವಯಲ್ಲಿ ಏರಿಕೆ ಪ್ರಮಾಣ ಶೇ. 10ರಷ್ಟಿದೆ. ಹೀಗಾಗಿ ಕೇಂದ್ರ ಸರಕಾರ ರಾಜ್ಯಕ್ಕೆ ಹಂಚಿಕೆ ಮಾಡುತ್ತಿರುವ ವಿದ್ಯುತ್ ಪ್ರಮಾಣವನ್ನೂ ಹೆಚ್ಚಿಸಬೇಕು ಎಂದರು.
ವಿದ್ಯುತ್ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಜತೆಗೆ ನಿತ್ಯದ ಬೇಡಿಕೆ ಆಧಾರದ ಮೇಲೆ ಹೆಚ್ಚುವರಿಯಾಗಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಲ್ಲಿದ್ದಲು ಸೌಲಭ್ಯ ಇಲ್ಲದ ಕಾರಣ ಛತ್ತೀಸ್‌ಘಡ್‌ದ ಗೋದ್ನಾದಲ್ಲಿ ಶಾಖೋತ್ಪನ್ನ ಆಧಾರಿತ ವಿದ್ಯುತ್ ಉತ್ಪಾದನೆ ಘಟನೆ ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಅಸಂಪ್ರದಾಯಿಕ ಮೂಲಗಳಿಂದಲೂ ವಿದ್ಯುತ್ ಉತ್ಪಾದಿಸಲು ವಿಶೇಷ ಪ್ರಯತ್ನ ನಡೆದಿದ್ದು, ನವೀಕರಿಸಬಹುದಾದ ಇಂಧನ ನೀತಿಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಮುಂದಿನ ಐದು ವರ್ಷದಲ್ಲಿ ಐದು ಸಾವಿರ ಮೆಗಾವ್ಯಾಟ್ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.