ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣ ಕುರಿತಂತೆ ಪಕ್ಷೇತರರ ವಿರುದ್ಧ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ದೂರು ನೀಡಿದ್ದ ಐವರು ಮತದಾರರಲ್ಲಿ ಇಬ್ಬರು ಸೋಮವಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು, ಬಲವಂತದಿಂದ ತಮ್ಮ ಸಹಿ ಹಾಕಿಸಿಕೊಂಡಿರುವುದಾಗಿ ತಿಳಿಸುವ ಮೂಲಕ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ.
ಪಕ್ಷೇತರ ಶಾಸಕರ ವಿರುದ್ಧ ಮತದಾರರಾದ ಹಿರಿಯೂರಿನ ಎಂ.ಬಸವರಾಜ್, ಪಾವಗಡದ ಕೃಷ್ಣ ನಾಯಕ್, ಹೊಸದುರ್ಗದ ನಾಗರಾಜ್, ಗಂಗಾವತಿಯ ಯಮನಪ್ಪ ಮತ್ತು ಮಳವಳ್ಳಿಯ ಚನ್ನೇಗೌಡ ಸ್ಪೀಕರ್‌ಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸ್ಪೀಕರ್ ಕೆ.ಜಿ.ಬೋಪಯ್ಯ ಹಾಗೂ ಐವರು ಮತದಾರರು ಸೋಮವಾರದೊಳಗೆ ಉತ್ತರ ನೀಡುವಂತೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ಆ ಹಿನ್ನೆಲೆಯಲ್ಲಿ ಇಂದು ಗಂಗಾವತಿಯ ಯಮನಪ್ಪ ಮತ್ತು ಹೊಸದುರ್ಗದ ನಾಗರಾಜ್ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ಪಕ್ಷೇತರರ ವಿರುದ್ಧದ ಅರ್ಜಿಗೆ ಪ್ರಭಾವಿ ವ್ಯಕ್ತಿಗಳು ಬಲವಂತದಿಂದ ಸಹಿ ಹಾಕಿಸಿಕೊಂಡಿದ್ದಾರೆ. ಅಲ್ಲದೇ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಏತನ್ಮಧ್ಯೆ ಮುಖ್ಯಮಂತ್ರಿಗಳು ಕೂಡ ಅಫಿಡವಿಟ್ ಸಲ್ಲಿಸಿದ್ದಾರೆ.
ಒಟ್ಟಾರೆ ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣ ಕುರಿತಂತೆ ಇಬ್ಬರು ಮತದಾರರು ಉಲ್ಟಾ ಹೊಡೆಯುವ ಮುಖೇನ ಮತ್ತೊಂದು ತಿರುವು ಪಡೆದುಕೊಂಡದೆ. ಸೋಮವಾರ ಐವರು ಮತದಾರರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಉಳಿದ ಮೂವರು ಮತದಾರರು ಹಾಗೂ ಸ್ಪೀಕರ್ ಕೆ.ಜಿ.ಬೋಪಯ್ಯ ಶುಕ್ರವಾರದೊಳಗೆ ಉತ್ತರ ನೀಡುವಂತೆ ಸೂಚಿಸಿ ವಿಚಾರಣೆಯನ್ನು ನ.12ಕ್ಕೆ ಮುಂದೂಡಿದೆ.
ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಹೈಕೋರ್ಟ್ ನೀಡಿರುವ ನೋಟಿಸ್‌ಗೆ ಉತ್ತರ ನೀಡಬೇಕೆ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಇದ್ದಾರೆನ್ನಲಾಗಿದೆ. ವಿಧಾನಸಭೆಯಲ್ಲಿ ಸ್ಪೀಕರ್ ಆದೇಶವೇ ಅಂತಿಮವಾಗಿದ್ದು, ಹೈಕೋರ್ಟ್ ನೋಟಿಸ್‌ಗೆ ಉತ್ತರ ನೀಡಬೇಕಾದ ಅಗತ್ಯ ಇದೆಯೇ ಎಂಬ ಬಗ್ಗೆ ಕಾನೂನು ತಜ್ಞರಲ್ಲಿ ಚರ್ಚಿಸುತ್ತಿದ್ದಾರೆ ಎಂದು ಮೂಲವೊಂದು ತಿಳಿಸಿದೆ.