ಚಿಕ್ಕಬಳ್ಳಾಪುರ, ಸೋಮವಾರ, 8 ನವೆಂಬರ್ 2010( 13:00 IST )
ಆಡಳಿತಾರೂಢ ರಾಜ್ಯ ಸರಕಾರ ಕೇಂದ್ರ ಸರಕಾರದ ಹಣವನ್ನೇ ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಆ ಕಾರ್ಯಕ್ರಮವೇ ತನ್ನದೆಂದು ಜಂಭ ಕೊಚ್ಚಿಕೊಳ್ಳುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
ಅವರು ನಂದಿ ಹೋಬಳಿಯಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಪ್ರಚಾರಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಹೋಬಳಿ ಮಟ್ಟದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಿಂದ ಬಿಡುಗಡೆ ಆಗುತ್ತಿರುವ ಅನುದಾನವನ್ನು ರಾಜ್ಯ ಸರಕಾರ ಸಮರ್ಪಕವಾಗಿ ಬಳಸದೆ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿರುವುದಾಗಿಯೂ ದೂರಿದರು.
ಗ್ರಾಮ ಪಂಚಾಯ್ತಿಯಿಂದ ಜಿ.ಪಂವರೆಗೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ಕೇಂದ್ರದ ಹಣದಿಂದ. ಆದರೆ ಈ ಯೋಜನೆಗಳಲ್ಲಿ ಕೇಂದ್ರ ಸರಕಾರದ ಹೆಸರನ್ನೂ ಪ್ರಸ್ತಾಪಿಸದೆ ರಾಜ್ಯ ಸರಕಾರ ಜನರನ್ನು ವಂಚಿಸುತ್ತಿದೆ. ಶಾಸಕರ ಖರೀದಿ, ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವ ಯಡಿಯೂರಪ್ಪ ನೇತೃತ್ವದ ಸರಕಾರ ಅನೇಕ ಕೇಂದ್ರದ ಕಾರ್ಯಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತಂದಿಲ್ಲ. ಕಾಮಗಾರಿಗಳು ಸಮರ್ಪಕವಾಗಿ ನಡೆಯದೆ ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಅಭಿವೃದ್ಧಿಗಾಗಿ ಕೇಂದ್ರದಿಂದ ಬರುವ ನಿಧಿಯಲ್ಲಿ ಕೇವಲ ಶೇ.60ರಷ್ಟು ಖರ್ಚಾಗುತ್ತಿದೆ. ಹಾಗಾದರೆ ಉಳಿದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಮೊಯ್ಲಿ ಪ್ರಶ್ನಿಸಿದರು.