ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭ್ರಷ್ಟಚಾರವನ್ನು ಪೋಷಿಸಿದ್ದು ಕಾಂಗ್ರೆಸ್, ಜೆಡಿಎಸ್: ಸಿ.ಟಿ.ರವಿ (Congress | BJP | CT Ravi | JDS | Yeddyurappa | Kumaraswamy)
Bookmark and Share Feedback Print
 
ಭ್ರಷ್ಟಾಚಾರದ ಸಸಿ ನೆಟ್ಟು ಹೆಮ್ಮರವಾಗಿಸಿದ ಕೀರ್ತಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸಲ್ಲುತ್ತದೆ ಎಂದು ಬಿಜೆಪಿ ವಕ್ತಾರ ಸಿ.ಟಿ.ರವಿ ಗಂಭೀರವಾಗಿ ಆರೋಪಿಸಿದ್ದಾರೆ.

ಹಾಸನಾಂಬ ದೇವಾಲಯಕ್ಕೆ ಪತ್ನಿ ಜೊತೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಪೆಡಂಭೂತ ಗ್ರಾಮಲೆಕ್ಕಾಧಿಕಾರಿ ಕಚೇರಿಯಿಂದ ವಿಧಾನಸೌಧದವರೆಗೆ ವ್ಯಾಪಿಸಿದೆ. ಇದರ ನಿರ್ಮೂಲನೆಗಾಗಿ ಪ್ರತಿಯೊಬ್ಬರಿಗೂ ಅಂತರಂಗ ಶುದ್ದಿ ಮಾಡಿಕೊಳ್ಳುವ ಬುದ್ದಿ ನೀಡು ಎಂದು ಹಾಸನಾಂಬೆಗೆ ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಎಲ್ಲರಿಗೂ ಅರ್ಹತೆ ಇದೆ. ಯಾರನ್ನು ಸಚಿವರನ್ನಾಗಿ ಮಾಡಿದರೆ ಒಳ್ಳೆಯದು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹಾಸನಾಂಬ ಕಣ್ಣು ಬಿಟ್ಟಿದ್ದಕ್ಕೆ ಎಚ್.ಡಿ.ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಿರಲಿಲ್ಲವೇ ಅದೇ ರೀತಿ ಆ ತಾಯಿ ಆಶೀರ್ವಾದ ಮಾಡಿದರೆ ನಾನೂ ಸಚಿವನಾಗುತ್ತೇನೆ ಎಂದರು.

ಪರಿಶ್ರಮ ಹಾಗೂ ಪಕ್ಷ ನಿಷ್ಠೆಯೇ ಸಚಿವನಾಗಲು ಇರುವ ಬಂಡವಾಳ. ಇದೇ ಬಂಡವಾಳ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣವಾಯಿತು ಎಂದು ವ್ಯಾಖ್ಯಾನಿಸಿದರು.

ಸಚಿವ ಸಂಪುಟ ವಿಸ್ತರಣೆ ಸಂದರ್ಭ ಮೋಸ ಆಗಲ್ಲ ಎಂಬ ದೃಢವಿಶ್ವಾಸ ಹೊಂದಿದ್ದೇನೆ. ಇದಕ್ಕಾಗಿ ಯಾವ ಲಾಬಿ ಮಾಡಲಾರೆ. ಸಚಿವ ಪದವಿ ಸಿಕ್ಕರೂ ಬಿಜೆಪಿ ಕಾರ್ಯಕರ್ತ, ದೊರೆಯದಿದ್ದರೂ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಹೇಳಿದರು.

ಪಕ್ಷದ ಆಂತರಿಕ ಸಂಗತಿಯನ್ನು ಪಕ್ಷದ ವೇದಿಕೆಯಲ್ಲಿ ಮಾತ್ರ ಚರ್ಚಿಸಬೇಕು. ಸಾರ್ವಜನಿಕ ವೇದಿಕೆ ಬಳಸಿಕೊಳ್ಳಬಾರದು ಎಂಬ ನಿರ್ದೇಶನವಿದೆ. ಅದರ ಹೊರತಾಗಿ ಯಾವ ಸಂಗತಿ ಬೇಕಾದರೂ ಮಾತನಾಡಲು ಪಕ್ಷದ ಮುಖಂಡರಿಗೆ ಸ್ವಾತಂತ್ರ್ಯವಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ