ಬಹುತೇಕ ಪಕ್ಷೇತರ ಶಾಸಕರನ್ನು ಸಂಪುಟದಿಂದ 2011ರ ಮಾರ್ಚ್‌ನಲ್ಲಿಯೇ ಕೈಬಿಡಲು ವ್ಯವಸ್ಥಿತ ಹುನ್ನಾರ ನಡೆದಿತ್ತು ಎಂದು ಅನರ್ಹ ಶಾಸಕ ಶಿವರಾಜ ತಂಗಡಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ರಚನೆಗೆ ಮುಖ್ಯ ಪಾತ್ರವಹಿಸಿದ್ದ 5 ಪಕ್ಷೇತರ ಶಾಸಕರನ್ನು ಮುಂದಿನ ವರ್ಷ ಸಂಪುಟದಿಂದ ಕೈಬಿಟ್ಟು ಸ್ವಂತ ಬಲದಲ್ಲಿ ಸರಕಾರ ರಚನೆಗೆ ವಿಶ್ವಾಸ ದ್ರೋಹಿ ಮುಖ್ಯಮಂತ್ರಿ ಯಡಿಯೂರಪ್ಪ ಹುನ್ನಾರ ನಡೆಸಿದ್ದರು. ಹೀಗಾಗಿ ಬಿಜೆಪಿ ಭಿನ್ನಮತೀಯ ಸಚಿವರು ಹಾಗೂ ಪಕ್ಷೇತರ ಸಚಿವರು ಭಿನ್ನಮತದಲ್ಲಿ ಗುರುತಿಸಿಕೊಳ್ಳುವುದಕ್ಕೆ ಮುಖ್ಯ ಕಾರಣವಾಯಿತು. ಇಷ್ಟರಲ್ಲೇ ಸರಕಾರಕ್ಕೆ ಮತ್ತೆ ಸಂಚಕಾರ ಉಂಟಾಗಲಿದೆ ಎಂದರು.
ತತ್ವ, ಸಿದ್ದಾಂತಕ್ಕೆ ಹೆಸರುವಾಸಿಯಾಗಿದ್ದ ಬಿಜೆಪಿ ಸರಕಾರ ಈಗ ಭ್ರಷ್ಟಾಚಾರಕ್ಕೆ ಪ್ರಮುಖವಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 17 ಪಕ್ಷೇತರರ ಬೆಂಬಲ ಪಡೆದು 5 ವರ್ಷ ಕೇಂದ್ರದಲ್ಲಿ ಆಳ್ವಿಕೆ ನಡೆಸಿದ್ದರು. ಆದರೆ ರಾಜ್ಯ ಸರಕಾರ ಕೇವಲ ಐದು ಶಾಸಕರನ್ನು ಉಳಿಸಿಕೊಂಡು ಉತ್ತಮ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಕುಮಾರಸ್ವಾಮಿ ವಚನ ಭ್ರಷ್ಟ ಎಂದೂ ಹಾಗೂ ಪುಣ್ಯ ಕೋಟಿ ಕಥೆ ಹೇಳಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರಕಾರ ಈಗ ಸದ್ದಾಂ ಹುಸೇನ್ ಆಡಳಿತ ನಡೆಸುತ್ತಿದೆ ಎಂದು ದೂರಿದರು.