ಮಳೆಯಿಂದ ಹಾನೀಗೀಡಾದ ಚಿತ್ರದುರ್ಗದ ಮಠದಕುರುಬರ ಹಟ್ಟಿಗೆ ಭಾನುವಾರ ಭೇಟಿ ನೀಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ ನಿರಾಶ್ರಿತರಿಗೆ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿ, ನಿರಾಶ್ರಿತರಿಗೆ ಪಕ್ಷದಿಂದಲೂ ನೆರವು ನೀಡಲಾಗುವುದು. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಜನರಿಂದ ಚಂದಾ ಎತ್ತಿ ನಿರಾಶ್ರಿತರಿಗೆ ನೆರವು ಒದಗಿಸಲಾಗುವುದು. ಜಿಲ್ಲಾ ಮುಖಂಡರು, ಕಾರ್ಯಕರ್ತರಿಗೂ ನೆರವು ನೀಡಲು ಹೇಳುತ್ತೇನೆ ಎಂದು ಭರವಸೆ ನೀಡಿದರು.
ನಿರಾಶ್ರಿತರಿಗೆ ಸರಕಾರ ನೀಡಿರುವ ಪರಿಹಾರ ಯಾತಕ್ಕೂ ಸಾಲದು. ಹೆಚ್ಚಿನ ಪರಿಹಾರ ನೀಡುವ ಜತೆ ಸೂರು ಕಳೆದುಕೊಂಡವರಿಗೆ ಶೀಘ್ರ ಮನೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಶೆಡ್‌ನಲ್ಲಿ ದೀಪಾವಳಿ ಆಚರಿಸಲು ಮುಂದಾಗಿರುವುದು ಅರ್ಥವಿಲ್ಲದ್ದು. ಮಹಾಮಳೆಗೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದ ಜನರ ತಲೆ ಮೇಲೊಂದು ಸೂರು ನೀಡಲು ಇವರಿಂದ ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಶಾಸಕ, ವಿಧಾನ ಪರಿಷತ್ ಸದಸ್ಯರ ಅನುದಾನ ಬಿಡುಗಡೆಯಲ್ಲಿ ಸರಕಾರ ತಾರತಮ್ಯ ಅನುಸರಿಸುತ್ತಿದೆ. ಬೇಕಾದ ಶಾಸಕರಿಗೆ ಸರಿಯಾಗಿ ಅನುದಾನ ಬಿಡುಗಡೆಯಾಗಿದೆ. ಪ್ರತಿಪಕ್ಷ ಶಾಸಕರಿಗೆ ಈವರೆಗೂ ಅನುದಾನ ನೀಡಿಲ್ಲ ಎಂದು ದೂರಿದರು.