ನಮ್ಮ ಬೇಡಿಕೆ ಏನಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಳಗಿಳಿಯಬೇಕು. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.
ಇಲ್ಲಿ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಇಬ್ಬರು ಆಪ್ತರನ್ನು ಮಂತ್ರಿ ಮಾಡಲು ಸಂಪುಟ ವಿಸ್ತರಣೆ ಮಾಡಿದರು. ಗೂಳಿಹಟ್ಟಿ ಶೇಖರ ಅವರನ್ನು ಉದ್ದೇಶಪೂರ್ವಕವಾಗಿಯೇ ಕೈಬಿಟ್ಟರು ಎಂದು ದೂರಿದರು.
ಸುಮಾರು 15 ಜನ ಸಮಾನ ಮನಸ್ಕರು ಒಟ್ಟಾಗಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ. ಅದರಂತೆಯೇ ಯಡಿಯೂರಪ್ಪನವರಲ್ಲಿ ತಮಗೆ ವಿಶ್ವಾಸ ಇಲ್ಲ ಎಂದು ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ. ನಮ್ಮದೇನಿದ್ದರೂ ನಾಯಕತ್ವದ ವಿರುದ್ಧ ಹೋರಾಟವೇ ಹೊರತು ಪಕ್ಷದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.
ಮಿತಿ ಮೀರಿದ ಭ್ರಷ್ಟಾಚಾರ ತಡೆಯಲು ಇಂಥ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು. ನಾವೆಲ್ಲರೂ ಇನ್ನೂ ಬಿಜೆಪಿಯಲ್ಲೇ ಇದ್ದೇವೆ. ಸುಪ್ರೀಂ ಕೋರ್ಟ್ ತಮ್ಮ ಪರ ತೀರ್ಪು ನೀಡಿದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಮುಂದೆ ನಾಯಕತ್ವ ಬದಲಾವಣೆ ಬೇಡಿಕೆ ಇಡುವುದು ಖಚಿತ. ಒಂದು ವೇಳೆ ತೀರ್ಪು ವಿರುದ್ಧ ಬಂದರೆ ನಾವು ಮತ್ತೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದರು.
'ನನಗಂತೂ ಬಿಜೆಪಿ ಬಿ ಫಾರ್ಮ್ ಅನಿವಾರ್ಯವಲ್ಲ. ಜೆಡಿಎಸ್ ತೊರೆದು ಬಿಜೆಪಿಗೆ ಬಂದಿರುವ ನನ್ನ ಕನಸು ಭಗ್ನಗೊಂಡಿದೆ. ಪಕ್ಷಕ್ಕೆ ಸೇರಿದ ಕೆಲವು ದಿನದಿಂದಲೇ ನನ್ನ ಮೊಬೈಲ್ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಅಲ್ಲದೇ ನಮ್ಮನ್ನೆಲ್ಲ ಅಸ್ಪೃಶ್ಯರಂತೆ ಕಾಣಲಾಗುತ್ತಿದೆ' ಎಂದು ಅಳಲು ತೋಡಿಕೊಂಡರು.
ಕಳೆದ ಎರಡೂವರೆ ವರ್ಷದಿಂದ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯವಾಗಿಲ್ಲ. ಏನಿದ್ದರೂ ಬಳ್ಳಾರಿ, ಶಿವಮೊಗ್ಗ ಜಿಲ್ಲೆಗೆ ಹಣ ಹರಿದು ಹೋಗುತ್ತಿದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಈಗಲೇ ಚುನಾವಣೆ ಬಂದೇ ಬಿಟ್ಟಿತೆಂಬ ಭ್ರಮೆಯಲ್ಲಿ ಜಿಲ್ಲೆಯ ಕೆಲ ನಾಯಕರು, ಮಂತ್ರಿಗಳು ಅರಭಾವಿ ಮತಕ್ಷೇತ್ರಕ್ಕೆ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ಅವರು ಮೊದಲು ಬರಲಿರುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿ ಎಂದು ಸವಾಲೆಸೆದರು.