ಜಲ್ ಚಂಡಮಾರುತದ ಪರಿಣಾಮವಾಗಿ ಸುರಿದ ವರ್ಷಧಾರೆಯಿಂದಾಗಿ ಇಡೀ ರಾಜ್ಯವೇ ನಲುಗಿ ಹೋಗಿದೆ. ಮಳೆಯ ಆರ್ಭಟಕ್ಕೆ ಜನಜೀವನ ತತ್ತರಿಸಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ರೈತನಿಗೆ ಬಂದೊದಗಿದೆ.
ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಸಿದ್ದವಾಗಿದ್ದ ಪೈರು ನೆಲ ಕಚ್ಚಿದೆ. ಕೆಲವೆಡೆಯಂತೂ ಮಳೆ ಹೆಚ್ಚಾಗಿ ಬೆಳೆ ಕೊಳೆಯುವಂತಾಗಿದೆ. ಜಲ್ ಚಂಡಮಾರುತದ ಪ್ರಭಾವ ಸೋಮವಾರ ಕ್ಷೀಣಿಸಿದ್ದರಿಂದಾಗಿ ಮಳೆಯ ಅಬ್ಬರವೂ ಕಡಿಮೆಯಾಗಿದೆ.
ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿ ಬೀಸುತ್ತಿರುವ ಜಲ್ ಚಂಡಮಾರುತ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯನ್ನು ಉಂಟು ಮಾಡಿದೆ.ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ತುಮಕೂರು, ದಾವಣಗೆರೆ, ಹಾಸನ ಮತ್ತಿತರ ಪ್ರದೇಶಗಳಲ್ಲಿ ವರುಣನ ಆರ್ಭಟಕ್ಕೆ ಹಲವು ಮನೆಗಳು ಧ್ವಂಸಗೊಂಡು, ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ. ಚಿತ್ರದುರ್ಗದಲ್ಲಿ ಹೆಚ್ಚಿನ ಮನೆಗಳು ವರುಣನ ಆರ್ಭಟಕ್ಕೆ ನೆಲಕಚ್ಚಿದೆ.
ಬೀದರ್, ಚಿಕ್ಕಬಳ್ಳಾಪುರ, ಮಂಡ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ತುಂಗಭದ್ರಾ ಜಲಾಶಯ ತುಂಬಿ ಹರಿಯುತ್ತಿದೆ. ಚಿತ್ರದುರ್ಗದಲ್ಲಿ 135 ಮಿ.ಮೀ. ಮಳೆಯಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ. ಬೆಳಗಾವಿ, ರಾಮನಗರ, ಚನ್ನಪಟ್ಟಣದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರ ಮಳೆ ಬೀಳುತ್ತಿದೆ.