ಉಡುಪಿಯ ಪೇಜಾವರಶ್ರೀ ದಲಿತರಿಗೆ, ಶೂದ್ರರಿಗೆ ದೀಕ್ಷೆ ನೀಡುವ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್.ಮೋಹನ್ ರಾಜ್ ಆರೋಪಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳು ದಲಿತರ ಉದ್ದಾರ ಮಾಡುವ ಅವಶ್ಯಕತೆ ಇಲ್ಲ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟರೆ ಸಾಕು, ದೀಕ್ಷೆ ನೀಡುವ ಕಾರ್ಯ ಹೀಗೆ ಮುಂದುವರಿದರೆ ಸಮಿತಿಯು ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮಿತಿಯು ಈ ಅನ್ಯಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನ.16ರಂದು ಉಡುಪಿಯ ಬನ್ನಂಜೆಯಲ್ಲಿ ದಲಿತ ಶೂದ್ರರ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಸಮಾವೇಶವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಅವರು ಉದ್ಘಾಟಿಸಲಿದ್ದು, ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ದೇವನೂರು ಮಹಾದೇವ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.