ಅಕ್ರಮ ಅದಿರು ಲೂಟಿಯಲ್ಲಿ ನಮ್ಮವರೂ ಶಾಮೀಲಾಗಿದ್ದಾರೆ ಎಂದ ಕೂಡಲೇ ರೆಡ್ಡಿ ಸಹೋದರರು ಎಂದು ಅರ್ಥ ಕಲ್ಪಿಸಬೇಕಾಗಿಲ್ಲ. ಅವರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾವು ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಮಂಡ್ಯದಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದ ಸಂದರ್ಭದಲ್ಲಿ, ಅಕ್ರಮ ಗಣಿಗಾರಿಕೆಯಲ್ಲಿ ನಮ್ಮವರೂ ಸೇರಿದಂತೆ ಎಲ್ಲಾ ಪಕ್ಷದವರು ಶಾಮೀಲಾಗಿದ್ದರು ಎಂದು ತಿಳಿಸಿದ್ದರು. ಈ ಬಗ್ಗೆ ಮಂಗಳವಾರ ಸುದ್ದಿಗಾರರು ಆ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ನಮ್ಮವರು ಅಂದ ಕೂಡಲೇ ರೆಡ್ಡಿ ಸಹೋದರರು ಅಂತ ಯಾಕೆ ಗೂಬೆ ಕೂರಿಸುತ್ತೀರಿ? ಅವರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಲ್ಲ ಎಂದು ಸದನದ ಒಳಗೂ, ಹೊರಗೂ ಹೇಳಿದ್ದೇನೆ. ಅವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಲ್ಲ ಎಂದು ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲೂ ಸಾಬೀತಾಗಿದೆ. ಹಾಗಿದ್ದ ಮೇಲೆ ರೆಡ್ಡಿ ಸಹೋದರರು ಅಂತ ಅಪಾರ್ಥ ಕಲ್ಪಿಸಬೇಡಿ ಎಂದು ಸಮಜಾಯಿಷಿ ನೀಡಿದರಾದರೂ 'ನಮ್ಮವರು' ಅಂದ್ರೆ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡದೆ ನುಣುಚಿಕೊಂಡರು.
ಬಳ್ಳಾರಿ, ಚಿತ್ರದುರ್ಗ, ತುಮಕೂರುಗಳಲ್ಲಿ ಅದಿರನ್ನು ಲೂಟಿ ಮಾಡಲಾಗುತ್ತಿದೆ. ಕಬ್ಬಿಣದ ಅದಿರನ್ನು ರಕ್ಷಿಸಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ. ಆದರೆ ನಮ್ಮವರೂ ಸೇರಿದಂತೆ ಎಲ್ಲಾ ಪಕ್ಷದವರೂ ಅದಿರು ಲೂಟಿಯಲ್ಲಿ ತೊಡಗಿದ್ದಾರೆ ಎಂದು ನಿನ್ನೆ ಬಹಿರಂಗ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಅಕ್ರಮ ಅದಿರು ಲೂಟಿಗೆ ತಡೆಯೊಡ್ಡಿದ್ದರಿಂದಲೇ ನನ್ನ ಕುರ್ಚಿಯನ್ನು ಅಲುಗಾಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು.