ಕಷ್ಟ ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ: ಪರಮೇಶ್ವರ್
ಬೆಂಗಳೂರು, ಮಂಗಳವಾರ, 9 ನವೆಂಬರ್ 2010( 13:37 IST )
ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ನಾನು ಕಷ್ಟಕಾಲದಲ್ಲಿ ಕೆಪಿಸಿಸಿಯ ಅಧ್ಯಕ್ಷನಾಗಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಪಕ್ಷ ಬೇಕು. ಅಷ್ಟೇ ಅಲ್ಲ, ಕಾಂಗ್ರೆಸ್ ರಾಜ್ಯ, ರಾಷ್ಟ್ರಕ್ಕೆ ಅನಿವಾರ್ಯವಾಗಿದೆ ಎಂದರು.
ನಾನು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಆದರೂ ಪಕ್ಷದ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇರಿಸಿ ಕೆಪಿಸಿಸಿ ಅಧ್ಯಕ್ಷಗಾದಿ ಹೊಣೆಯನ್ನು ನೀಡಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರನ್ನು ಬೆಳೆಸಬೇಕಾದ ಅಗತ್ಯ ಇದೆ ಎಂದು ಹೇಳಿದರು. ಯುವಕರಿಗೆ ಹೆಚ್ಚಿನ ಆದ್ಯತೆ ಕೊಡುವುದು ನನ್ನ ಮೊದಲ ಗುರಿಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿ ಸರಕಾರ ಶಾಶ್ವತ ಯೋಜನೆಗಳ ಬಗ್ಗೆ ಗಮನ ಹರಿಸಿಲ್ಲ ಎಂದು ವಾಗ್ದಾಳಿ ನಡೆಸಿದ ಪರಮೇಶ್ವರ್, ರೈತರು ಗೊಬ್ಬರ ಕೇಳಿದ್ರೆ ಒದೆ ಬೀಳುತ್ತೆ. ರೈತರಿಗೂ ಈಗ ಸರಕಾರದ ನಿಲುವಿನ ಬಗ್ಗೆ ಭಯ ಕಾಡಲು ಶುರುವಾಗಿದೆ. ಸರಕಾರದ ಭಂಡತನದಿಂದಾಗಿ ಕೃಷಿ ಕ್ಷೇತ್ರ ನಿರ್ಲಕ್ಷ್ಯಕ್ಕೊಳಗಾದೆ ಎಂದು ಆರೋಪಿಸಿದರು.