'ನಾವೆಲ್ಲ ಒಂದೇ ರಾಜಕೀಯ ಗರಡಿಯಲ್ಲಿ ಪಳಗಿದವರು'...ಹೀಗೆಂದು ಹೇಳಿದ್ದು ಎಚ್.ಡಿ.ರೇವಣ್ಣ ಸಮ್ಮುಖದಲ್ಲಿ ಸಚಿವ ವಿ.ಸೋಮಣ್ಣ.
ಸೋಮಣ್ಣ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹೊತ್ತ ಬಳಿಕ ಅವರ ಸಭೆಗೂ ಗೈರು ಹಾಜರಾಗಿದ್ದ ರೇವಣ್ಣ, ಸೋಮವಾರ ನೇರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಸೋಮಣ್ಣಗೆ ಹಸ್ತಲಾಘವ ಮಾಡಿದರು. ಅಷ್ಟೇ ಅಲ್ಲ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಬಳಿಕ ಹಾಸನಾಂಬ ದೇವಸ್ಥಾನಕ್ಕೆ ಹೊರಟ ಇಬ್ಬರೂ ಮುಖಂಡರನ್ನು ನೋಡಿ ಅಲ್ಲಿದ್ದ ಅಧಿಕಾರಿಗಳು ಬೆಪ್ಪು. ಸೋಮಣ್ಣ ಕಾರಿನಲ್ಲಿಯೇ ಕುಳಿತ ರೇವಣ್ಣ ಹಾಸನಾಂಬ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು. ಬಳಿಕ ಇಬ್ಬರೂ ಜತೆಯಾಗಿ ನಿಂತು ಸುದ್ದಿಗಾರರೊಂದಿಗೆ ಮಾತನಾಡಿದರು.
'ಹಾಸನ ಜಿಲ್ಲೆಗೆ ಏನೇನು ಕೆಲಸ ಆಗಬೇಕಾಗಿದೆ? ಬಾಕಿ ಇರುವ ಕಾಮಗಾರಿ ಎಷ್ಟು ಎನ್ನುವ ಬಗ್ಗೆ ಮಾಹಿತಿ ನೀಡಿದ್ದೇನೆ. ಸಚಿವರು ಎಲ್ಲವನ್ನೂ ಮಾಡಿಕೊಡುವ ಭರವಸೆ ನೀಡಿದ್ದಾರೆ. ಆದ್ದರಿಂದ ಸದ್ಯಕ್ಕೆ ಪ್ರತಿಭಟನೆ ಚಿಂತೆ ಇಲ್ಲ' ಎಂದು ರೇವಣ್ಣ ಹೇಳಿದರು.
'ರೇವಣ್ಣ ಸಾಹೇಬರು ತಮ್ಮ ಅನುಭವದಲ್ಲಿ ಜಿಲ್ಲೆಗೆ ಏನೇನು ಆಗಬೇಕಾಗಿದೆ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ. ಅವರ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಜತೆಯಲ್ಲಿ ಮಾತನಾಡಿ, ಹತ್ತು ದಿನದಲ್ಲಿ ಹಲವು ಸಮಸ್ಯೆಗಳ ಪರಿಹಾರ ಮಾಡಲಾಗುವುದು. ಅಭಿವೃದ್ದಿಗೂ ಚಾಲನೆ ನೀಡಲಾಗುವುದು' ಎಂದು ಸೋಮಣ್ಣ ಹೇಳಿದರು.