ಬಸವಣ್ಣನ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಮರುಘಾಶ್ರೀ
ಚಿಂಚೋಳಿ, ಮಂಗಳವಾರ, 9 ನವೆಂಬರ್ 2010( 16:15 IST )
ಬಸವಣ್ಣನವರ ಪ್ರತಿಮೆ ಅನಾವರಣ ಮಾಡಿದರೆ ಮಾತ್ರ ಸಾಲದು. ಬಸವಣ್ಣನವರ ಸಂದೇಶ ಜೀವನದಲ್ಲಿ ಪ್ರಯೋಗ ಮಾಡಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಮುರುಘಾರಾಜೇಂದ್ರ ಶರಣರು ತಿಳಿಸಿದ್ದಾರೆ.
ಬಸವಣ್ಣನವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಅಣ್ಣ ಬಸವಣ್ಣನವರಿಗೆ ನಾವು ಕೊಡುವ ಗೌರವ. ಪ್ರಸ್ತುತ ಸಂದರ್ಭದಲ್ಲಿ ಇದು ಅತ್ಯಾವಶ್ಯಕ ಎಂದು ಹೇಳಿದರು.
ಚಿಂಚೋಳಿ ಮುಲ್ಲಾಮಾರಿ ಸೇತುವೆ ಸಮೀಪ ಸೋಮವಾರ ಮಹಾತ್ಮ ಬಸವೇಶ್ವರರ ಪ್ರತಿಮೆ ಅನಾವರಣ ಮಾಡಿದ ನಂತರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಬಸವಣ್ಣ ತ್ಯಾಗ ಮೂರ್ತಿ, ಭಾವೈಕ್ಯ ಮೂರ್ತಿ ಹಾಗೂ ಕಲ್ಯಾಣ ಮೂರ್ತಿ ಎಂದು ಬಣ್ಣಿಸಿದ ಶ್ರೀಗಳು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ, ಸಮಾನತೆ ಸಿಗಬೇಕು ಎಂಬುದು ಬಸವಣ್ಣನವರ ಉದ್ದೇಶವಾಗಿತ್ತು ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಸಮಾಜದಲ್ಲಿ ಪರಿವರ್ತನೆ ಮಾಡಿದರು. ಬಸವಣ್ಣ ಕೇವಲ ಶಿಲಾ ಮೂರ್ತಿ ಅಲ್ಲ. ಬಸವಣ್ಣ ಕಲ್ಪನೆಯಸಮಾಜ ನಿರ್ಮಾಣವಾಗಬೇಕಿದೆ. ಜಾತಿ ಮುಖ್ಯ ಅಲ್ಲ, ನೀತಿ ಮುಖ್ಯ ಎಂಬುದು ಬಸವಣ್ಣನ ನಿಲುವಾಗಿತ್ತು ಎಂದು ಪ್ರತಿಪಾದಿಸಿದರು.
ಮಹಾತ್ಮಾಗಾಂಧಿ ಜನ್ಮಭೂಮಿ ಗುಜರಾತ್‌ನಲ್ಲಿ ಬಸವಧರ್ಮ ಸಮ್ಮೇಳನ ಮಾಡಲು ಉದ್ದೇಶಿಸಲಾಗಿದ್ದು, ಈ ಅದ್ದೂರಿ ಸಮಾವೇಶದಲ್ಲಿ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.